×
Ad

ಚರಂಡಿ ಅವ್ಯವಸ್ಥೆ ವಿರುದ್ಧ ಸಾರ್ವಜನಿಕರ ಅಸಮಾಧಾನ

Update: 2016-06-18 23:23 IST

ಮಡಿಕೇರಿ, ಜೂ.18: ಜೂನ್ ತಿಂಗಳು ಆರಂಭಗೊಂಡು ವಾರಗಳೆೆರಡು ಕಳೆದರೂ ಬಿಸಿಲ ವಾತಾವರಣದ ನಡುವೆ ತುಂತುರು ಮಳೆ ಸುರಿಯುತ್ತಿದ್ದ ಜಿಲ್ಲೆಯಲ್ಲಿ ಮಳೆಯ ಕೊರತೆಯ ಆತಂಕ ಎದುರಾಗಿತ್ತು. ಆದರೆ ಶನಿವಾರ ಸಂಜೆ ಹಠಾತ್ತನೆ ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆ ಸುರಿದು ಚರಂಡಿ, ತೋಡುಗಳು ಉಕ್ಕಿ ಹರಿದವು. ಇದರ ಪರಿಣಾಮ ಹಲವು ಬಡಾವಣೆಗಳು ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿತು.

ಮುಂಗಾರು ಮಳೆ ನೆರೆಯ ಕೇರಳದಲ್ಲಿ ಆರಂಭಗೊಂಡು ವಾರ ಕಳೆೆದರೂ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ವಾಡಿಕೆಯ ಮಳೆ ಕಾಣಿಸಿಕೊಂಡಿರಲಿಲ್ಲ. ನಿರೀಕ್ಷಿತ ಮಳೆೆಯಾಗದೆ, ಬಿಸಿಲ ವಾತಾವರಣ ಮುಂದುವರಿದಿತ್ತು. ಆದರೆ ಇಂದು ಸಂಜೆ ಸುರಿದ ಭಾರೀ ಮಳೆಯಿಂದ ಜಿಲ್ಲೆಯಲ್ಲಿ ಮುಂಗಾರಿನ ವರ್ಷಾಧಾರೆ ಆರಂಭಗೊಂಡ ಅನುಭವವಾಯಿತು.

ಸಂಜೆ ಕಾಣಿಸಿಕೊಂಡ ಭಾರೀ ಮಳೆ ಎಡೆಬಿಡದೆ ಸುರಿದ ಪರಿಣಾಮ ಮಡಿಕೇರಿಯ ಎಲ್‌ಐಸಿ ಬಳಿಯ ಚರಂಡಿ, ತೋಡುಗಳು ಉಕ್ಕಿ ಹರಿದು ಸಮೀಪದ ಬಡಾವಣೆಯ ಮುಖ್ಯ ರಸ್ತೆಗಳು ಜಲಾವೃತಗೊಂಡವು. ಆತಂಕಗೊಂಡ ನಿವಾಸಿಗಳು ಮನೆಗೆ ನುಗ್ಗಿದ ರಸ್ತೆಯ ನೀರನ್ನು ರಸ್ತೆಗೇ ಚೆಲ್ಲುವ ಪರಿಸ್ಥಿತಿ ನಿರ್ಮಾಣವಾಯಿತು.

ನಗರದ ಕಾವೇರಿ ಲೇಔಟ್, ಆಂಜನೇಯ ದೇವಾಲಯದ ಬಳಿ ಓಂಕಾರೇಶ್ವರ ದೇವಾಲಯ ರಸ್ತೆಯಲ್ಲಿ ಚರಂಡಿಯ ನೀರು ಉಕ್ಕಿ ಹರಿದ ಪರಿಣಾಮ ಆಸುಪಾಸಿನ ಮನೆಗಳಿಗೆ ನೀರು ನುಗ್ಗಿತು. ಇದೇ ರೀತಿಯಾಗಿ ನಗರದ ಎತ್ತರ ಹಾಗೂ ತಗ್ಗಿನ ಪ್ರದೇಶಗಳ ಮನೆಗಳಿಗೂ ಮಳೆಯಿಂದ ಹಾನಿಯಾಯಿತು. ನಗರಸಭೆ ಮೂಲಕ ನಗರದೆಲ್ಲೆಡೆ ನಡೆದಿರುವ ಚರಂಡಿ ಹಾಗೂ ತೋಡುಗಳ ಅವೈಜ್ಞ್ಞಾನಿಕ ಕಾಮಗಾರಿಗಳ ನಿಜ ಬಣ್ಣ ಭಾರೀ ಮಳೆಯಿಂದ ಬಯಲಾಗಿದೆ. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗದೆ, ರಸ್ತೆಗಳ ಮೇಲೆ ಹರಿದು ಸಂಕಷ್ಟವನ್ನು ತಂದೊಡ್ಡಿತು. ವಾಹನ ಚಾಲಕರು ಹಾಗೂ ಪಾದಾಚಾರಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ವಿಸ್ತರಣೆಗೊಳ್ಳುತ್ತಿರುವ ಮಹದೇವಪೇಟೆ ರಸ್ತೆಯಂತೂ ಕೆಸರು ತುಂಬಿ ನರಕ ಸದೃಶವಾಗಿತ್ತು.

ಕಳೆದ ಕೆಲವು ತಿಂಗಳುಗಳಿಂದ ನಗರದಲ್ಲಿ ಭರದಿಂದ ತೋಡು ಹಾಗೂ ಚರಂಡಿ ಕಾಮಗಾರಿಗಳು ನಡೆಯಿತ್ತಾದರೂ ಅವೈಜ್ಞಾನಿಕ ಕ್ರಮ ಅನುಸರಿಸಿದ ಪರಿಣಾಮ ಕೇವಲ ಒಂದು ದಿನ ಸುರಿದ ಭಾರೀ ಮಳೆಗೆ ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಯಿತು. ನಗರಸಭೆಯ ಕಾರ್ಯ ವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News