ಬಿ.ಇಡಿ. ಪರೀಕ್ಷೆಗಳು ಕ್ಲಸ್ಟರ್ ಪರೀಕ್ಷಾ ಕೇಂದ್ರಕ್ಕೆ: ಪ್ರೊ ತ್ಯಾಗರಾಜ
ಚಿಕ್ಕಮಗಳೂರು, ಜೂ.18: ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ 2016-17ನೆ ಸಾಲಿನಿಂದ ಬಿ.ಇಡಿ. ಪರೀಕ್ಷೆಗಳನ್ನು ಕ್ಲಸ್ಟರ್ ಪರೀಕ್ಷಾ ಕೇಂದ್ರಗಳಲ್ಲಿ ನಡೆಸುವ ಕುರಿತು ಕುವೆಂಪು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದಲ್ಲಿ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಬಿ.ಇಡಿ. ಕಾಲೇಜುಗಳ ಪ್ರಾಂಶುಪಾಲರ ಸಮಾಲೋಚನಾ ಸಭೆಯು ಪರೀಕ್ಷಾಂಗ ಕುಲಸಚಿವ ಪ್ರೊ ಸಿ.ಎಂ.ತ್ಯಾಗರಾಜ ಅಧ್ಯಕ್ಷತೆಯಲ್ಲಿ ನಡೆಯಿತು.
ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ದೇಶಕ್ಕೆ ಉತ್ತಮ ವಿದ್ಯಾಥಿ ಗರ್ಳನ್ನು ರೂಪಿಸುವ ಮಹತ್ತರವಾದ ಜವಾಬ್ದಾರಿಯನ್ನು ಹೊಂದಿರುವ, ಭಾವೀ ಶಿಕ್ಷಕರನ್ನು ತರಬೇತುಗೊಳಿಸುವ ಬಿ.ಇಡಿ. ಕಾಲೇಜುಗಳ ಪರೀಕ್ಷೆಗಳಲ್ಲಿ ಪಾರದರ್ಶಕತೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವಿಕೆ ಮತ್ತು ಸರಕಾರದ ಆದೇಶಗಳ ಪಾಲನೆ ಕುರಿತಂತೆ ಚರ್ಚೆ ನಡೆಯಿತು. ಪ್ರತಿಯೊಂದು ಕಾಲೇಜಿನಲ್ಲಿಯೂ ಪ್ರತ್ಯೇಕವಾಗಿ ಪರೀಕ್ಷೆಗಳನ್ನು ನಡೆಸುವ ಬದಲಿಗೆ ಪ್ರತಿ ಜಿಲ್ಲಾ ಹಾಗೂ ತಾಲೂಕು ಕೇಂದ್ರದಲ್ಲಿ ಕ್ಲಸ್ಟರ್ ಮಾದರಿಯ ಒಂದೇ ಕೇಂದ್ರದಲ್ಲಿ ಪರೀಕ್ಷೆಗಳನ್ನು ನಡೆಸುವ ಕುರಿತು ಸಾಧಕ-ಬಾಧಕಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು.
ಸರಕಾರಿ ಕಾಲೇಜು ತೀರಾ ಅವಶ್ಯವಿದ್ದಲ್ಲಿ ಅನುದಾನಿತ ಕಾಲೇಜನ್ನು ಕ್ಲಸ್ಟರ್ ಕೇಂದ್ರವಾಗಿ ಆಯ್ಕೆ ಪರೀಕ್ಷೆ ನಡೆಸುವ ನಿರ್ಣಯ ತೆಗೆದುಕೊಳ್ಳಲಾಯಿತು. ಗ್ರಾಮೀಣ ಭಾಗದ ವಿದ್ಯಾಥಿಗಳಿಗೆ ತೊಂದರೆಯಾಗದಂತೆ ಈಗಾಗಲೇ 18 ಕೇಂದ್ರಗಳಲ್ಲಿ ನಡೆಯುತ್ತಿದ್ದ ಕ್ಲಸ್ಟರ್ ಪದ್ಧತಿಯ ಪರೀಕ್ಷೆಯನ್ನು 10 ಕೇಂದ್ರಗಳಲ್ಲಿ ನಡೆಸುವಂತೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಶಿಕ್ಷಣ ನಿಕಾಯದ ಡೀನ್ ಡಾ.ಎಸ್.ಎಂ.ಪ್ರಕಾಶ್, ಕಾಲೇಜು ಅಭಿವೃದ್ಧಿ ಪರಿಷತ್ತಿನ ನಿರ್ದೇಶಕ ಡಾ.ಬಿ.ಗಣೇಶ ಮತ್ತು ಸ್ನಾತಕೋತ್ತರ ಶಿಕ್ಷಣ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಎಸ್.ಎಸ್.ಪಾಟೀಲ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಎಂ.ಎಸ್. ವೇದಾವತಿ ಪ್ರಾರ್ಥಿಸಿದರು. ಸಿ.ನಾಗರಾಜ ಸ್ವಾಗತಿಸಿ, ನಿರೂಪಿಸಿದರು. ಜಯಕುಮಾರ್ ವಂದಿಸಿದರು.