×
Ad

‘ಆರೋಗ್ಯ ಚೆನ್ನಾಗಿರಬೇಕಾದರೆ ಸ್ವಚ್ಛತೆ ಅಗತ್ಯ: ಡಾ.ದೊಡ್ಡಮಲ್ಲಪ್ಪ

Update: 2016-06-18 23:32 IST

ಕಡೂರು, ಜೂ. 18: ಆರೋಗ್ಯ ಚೆನ್ನಾಗಿರಬೇಕಾದರೆ ಮೊದಲು ಸ್ವಚ್ಛತೆ ಇರಬೇಕು. ಆರೋಗ್ಯ ಭಾಗ್ಯ ಚೆನ್ನಾಗಿರಬೇಕಾದರೆ ಸ್ವಚ್ಛತೆ ಅಗತ್ಯ ಎಂದು ಸ್ವಚ್ಛತಾ ಅಭಿಯಾನದ ಜಿಲ್ಲಾ ನೋಡಲ್ ಅಧಿಕಾರಿ ಡಾ.ದೊಡ್ಡಮಲ್ಲಪ್ಪ ಹೇಳಿದರು.

 ಪಟ್ಟಣದ 12ನೆ ವಾರ್ಡಿನ ಗಾಂಧಿನಗರದಲ್ಲಿ ಪುರಸಭೆೆ ಮತ್ತು ಆರೋಗ್ಯ ಇಲಾಖೆಯ ಆಶ್ರಯದಲ್ಲಿ ನಡೆದ ಸ್ವಚ್ಛತಾ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಚ್ಛತೆ ಇಲ್ಲದಿದ್ದರೆ ಅನಾರೋಗ್ಯ ಸಮಸ್ಯೆಗಳು ಕಾಡುತ್ತವೆ. ಸ್ವಚ್ಛತೆ ಎಂದರೆ ದೇವರು, ಸ್ವಚ್ಛತೆ ಎಲ್ಲಿರುತ್ತದೆಯೋ ಅಲ್ಲಿ ದೇವರಿರುತ್ತಾನೆ. ಹಣದಿಂದ ರೋಗ ಗೆಲ್ಲಲು ಸಾಧ್ಯವಿಲ್ಲ. ಜಾಣತನದಿಂದ ರೋಗಗಳು ಬರುವುದನ್ನು ತಡೆಗಟ್ಟಬಹುದು. ಸ್ವಚ್ಛತೆ ಕಾಪಾಡುವುದರಿಂದ, ಪ್ರಾಣಹಾನಿ ಕಡಿಮೆ ಮಾಡಬಹುದು ಎಂದು ಹೇಳಿದರು.

ಸ್ವಚ್ಛತಾ ಸಪ್ತಾಹ ಕಾರ್ಯಕ್ರಮ ಜೂ.22ರ ವರೆಗೆ ನಡೆಯಲಿದೆ. ಜೂ.19 ರಂದು ಎಲ್ಲಾ ಸರಕಾರಿ ಕಟ್ಟಡಗಳಲ್ಲಿ, 20 ರಂದು ಸಾರ್ವಜನಿಕ ಪ್ರದೇಶಗಳಲ್ಲಿ, 21 ರಂದು ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂ 22 ರಂದು ಕಾರ್ಖಾನೆಗಳಿರುವ ಪ್ರದೇಶಗಳಲ್ಲಿ ಒಂದು ವಾರಗಳ ಕಾಲ ಸ್ವಚ್ಛತಾ ಅಭಿಯಾನ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸ್ವಚ್ಛತಾ ಸಪ್ತಾಹ ಕಾರ್ಯಕ್ರಮಕ್ಕೆ ಹಸಿರು ಬಾವುಟ ತೋರಿಸಿ ಚಾಲನೆ ನೀಡಿದ ಪುರಸಭಾ ಅಧ್ಯಕ್ಷೆ ಅನಿತಾರಾಜ್‌ಕುಮಾರ್ ಮಾತನಾಡಿ, ಇತ್ತೀಚೆಗೆ ಮಲೇರಿಯಾ, ಹಂದಿ ಜ್ವರ, ಚಿಕುನ್‌ಗುನ್ಯಾ, ಡೆಂಗ್ ಜ್ವರ, ವಾಂತಿ ಭೇದಿ, ಕಾಲರದಂತಹ ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿವೆ. ಸಾರ್ವಜನಿಕರು ಮುಂಜಾಗ್ರತಾ ಕ್ರಮವನ್ನು ಅನುಸರಿಸಬೇಕು. ಪುರಸಭೆಯ ಆರೋಗ್ಯ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸುವಂತೆ ಕರೆ ನೀಡಿದರು.

ತಾಲೂಕು ಆರೋಗ್ಯ ಅಧಿಕಾರಿ ಡಾ.ಪ್ರಭು ಮಾತನಾಡಿ, ತಾಲೂಕು ಆಡಳಿತದ ವತಿಯಿಂದ ಡೆಂಗ್ ಜ್ವರ ಮತ್ತು ಮಲೇರಿಯಾ ಹಾಗೂ ಇತರೆ ಸಾಂಕ್ರಾಮಿಕ ರೋಗಗಳ ಬಗ್ಗೆ ಈಗಾಗಲೇ ಆರೋಗ್ಯ ಇಲಾಖೆಯ ಆಶಾ ಕಾರ್ಯಕತೆರ್ಯರು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದಕ್ಕೆ ಪುರಸಭೆೆಯ ಸದಸ್ಯರು ಮತ್ತು ಆರೋಗ್ಯ ನಿರೀಕ್ಷಕರು ಸಹಕರಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮಕ್ಕೂ ಮೊದಲು ಕಾಮಧೇನು ನರ್ಸಿಂಗ್ ವಿದ್ಯಾರ್ಥಿಗಳು ಮನೆ-ಮನೆಗೆ ಭೇಟಿ ನೀಡಿ ಸ್ವಚ್ಛತೆಯ ಬಗ್ಗೆ ಕರಪತ್ರ ಹಂಚಿದರು. ಪುರಸಭೆಯ ಸಿಬ್ಬಂದಿ ಸ್ವಚ್ಛತೆ ಕಾರ್ಯ ನಡೆಸಿದರು.

ಈ ಸಂದರ್ಭ ಪುರಸಭೆ ಉಪಾಧ್ಯಕ್ಷ ಮಂಜುನಾಥ್, ಸದಸ್ಯ ಜಯಣ್ಣ, ಆರೋಗ್ಯ ನಿರೀಕ್ಷರಾದ ಹರೀಶ್, ಈಶ್ವರ್, ಕಾಮಧೇನು ನರ್ಸಿಂಗ್ ಶಾಲೆಯ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News