ತೀರ್ಥಹಳ್ಳಿ : ಸ್ವಚ್ಛತಾ ಸಪ್ತಾಹಕ್ಕೆ ಚಾಲನೆ
ತೀರ್ಥಹಳ್ಳಿ, ಜೂ.18: ಜನರು ಸ್ವಚ್ಛತೆಯ ಬಗ್ಗೆ ಮಾಹಿತಿ ಪಡೆದರೆ ರೋಗಗಳಿಂದ ರಕ್ಷಿಸಿಕೊಳ್ಳಬಹುದು. ತಮ್ಮ ಮನೆ, ಪರಿಸರ ಮತ್ತು ವೈಯಕ್ತಿಕವಾಗಿ ಸ್ವಚ್ಛವಾಗಿರಬೇಕಾಗಿರುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಕರೆ ನೀಡಿದ್ದಾರೆ.
ಪಟ್ಟಣದ ಬೆಟ್ಟಮಕ್ಕಿಯಲ್ಲಿ ನಡೆದ ಆರೋಗ್ಯ ಇಲಾಖೆಯವರ ಸ್ವಚ್ಛತಾ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಂಕ್ರಾಮಿಕ ರೋಗಗಳ ಹರಡುವಿಕೆಯ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಆರೋಗ್ಯ ಇಲಾಖೆ ಪ್ರಚಾರಪಡಿಸಬೇಕಾಗಿದೆ. ಪಟ್ಟಣ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಮತ್ತು ಸ್ವಚ್ಛತೆಗೆ ಪಟ್ಟಣ ಪಂಚಾಯತ್ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಲೋಕೇಶಪ್ಪ, ತಾಪಂ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್, ಪಪಂ ಸದಸ್ಯ ನವೀನ್‌ಕುಮಾರ್, ಆರೋಗ್ಯ ಇಲಾಖೆ ಸಹಾಯಕರಾದ ವಿಶ್ವನಾಥ್, ತೇಜಪ್ಪ ಉಪಸ್ಥಿತರಿದ್ದರು.