ಶೈಕ್ಷಣಿಕ ಸಾಲ ಸೌಲಭ್ಯ ವಿಸ್ತರಣೆ: ಡಾ.ಫೌಜ್ದಾರ್
ಮಡಿಕೇರಿ, ಜೂ.18 : ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಅರಿವು ಯೋಜನೆಯಡಿ ಸಾಮಾನ್ಯ ಪದವಿ, ಸ್ನಾತಕೋತ್ತರ ಪದವಿದರರಿಗೂ ಶೈಕ್ಷಣಿಕ ಸಾಲ ಸೌಲಭ್ಯ ಕಲ್ಪಿಸಲು ಸರಕಾರ ತೀರ್ಮಾನಿಸಿದ್ದು, ಅರ್ಹರು ಇದರ ಸದುಪಯೋಗಪಡಿಸಿಕೊಳ್ಳ ಬೇಕೆಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಎಸ್.ವೈ.ಎಂ. ಮಸೂದ್ ಫೌಜ್ದಾರ್ ಕರೆ ನೀಡಿದ್ದಾರೆ. ನಗರದ ಕಾಲೇಜು ರಸ್ತೆಯ ರಾಮಮಂದಿರ ಬಳಿಗೆ ಸ್ಥಳಾಂತರವಾಗಿರುವ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ನೂತನ ಕಚೇರಿಯನ್ನು ಉದ್ಘಾಟಿಸಿ ಬಳಿಕ ಮಾತನಾಡುತ್ತಿದ್ದರು. ಅರಿವು ಯೋಜನೆಯಡಿ ಈ ಹಿಂದೆ ವೃತ್ತಿಪರ ವ್ಯಾಸಂಗ ಮಾಡುತ್ತಿರುವವರಿಗೆ ಮಾತ್ರ ವಿದ್ಯಾಭ್ಯಾಸಕ್ಕಾಗಿ 50 ಸಾವಿರ ರೂ.ವರೆಗೆ ಸಾಲ ಸೌಲಭ್ಯ ನೀಡಲಾಗುತ್ತಿತ್ತು, ಈ ವರ್ಷದಿಂದ ಸಾಮಾನ್ಯ ಪದವಿ, ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಸಾಲ ಸೌಲಭ್ಯ ವಿಸ್ತರಿಸಲಾಗಿದೆ ಎಂದು ತಿಳಿಸಿದರು. ಸರಕಾರ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ಸ್ವಾವಲಂಬನೆ, ಶ್ರಮಶಕ್ತಿ, ಅರಿವು, ಕಿರುಸಾಲ, ಗಂಗಾ ಕಲ್ಯಾಣ, ಕೃಷಿಭೂಮಿ ಯೋಜನೆ, ಗೃಹ ಸಾಲ ಯೋಜನೆ ಮೇಲೆ ಬಡ್ಡಿ ಸಹಾಯಧನ ಹೀಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆ ಮೂಲಕ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ಸುಮಾರು 241 ಕೋಟಿ ರೂ. ಸಾಲ ಸೌಲಭ್ಯವನ್ನು ವಿತರಿಸಿ ಸುಮಾರು 91 ಸಾವಿರ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಶೇ.50ಕ್ಕೂ ಹೆಚ್ಚು ಸಾಲ ಮರುಪಾವತಿಯಾಗಿದೆ ಎಂದು ಅವರು ಹೇಳಿದರು. ಸ್ವಾವಲಂಬನ ಯೋಜನೆಯಡಿ ಸೇವಾ ವಲಯದಲ್ಲಿ ಬರುವ ಚಟುವಟಿಕೆಗಳಿಗೆ ಬ್ಯಾಂಕ್‌ಗಳು ಹಣಕಾಸು ಸಂಸ್ಥೆಗಳ ಸಹಯೋಗದೊಂದಿಗೆ ಗರಿಷ್ಠ 5 ಲಕ್ಷ ರೂ. ವರೆಗೆ ಆರ್ಥಿಕ ನೆರವು ಒದಗಿಸಲಾಗುತ್ತಿದೆ. ಶ್ರಮಶಕ್ತಿ ಯೋಜನೆಯಡಿ ಗ್ರಾಮೀಣ ಕುಶಲ ಕರ್ಮಿಗಳು ಹಾಗೂ ವೃತ್ತಿ ಕುಶಲ ಕಸುಬುದಾರರಿಗೆ ಕುಶಲತೆ ಮತ್ತು ತಂತ್ರಜ್ಞಾನ ಉತ್ತಮ ಪಡಿಸಿಕೊಳ್ಳಲು ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ 25 ಸಾವಿರ ರೂ.ವರೆಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ 2014-15ನೆ ಸಾಲಿನಲ್ಲಿ ಒಟ್ಟು 964 ಫಲಾನುಭವಿಗಳಿಗೆ 312.7 ಲಕ್ಷ ರೂ. ಗುರಿ ನಿಗದಿಪಡಿಸಲಾಗಿತ್ತು, ಮಾರ್ಚ್ 2015 ಮಾಹೆಯವರೆಗೆ ಒಟ್ಟು 605 ಫಲಾನುಭವಿಗಳಿಗೆ 183.39 ಲಕ್ಷ ರೂ. ಸಾಲವನ್ನು ವಿತರಣೆ ಮಾಡಿ ಶೇ.59 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು.
2015-16 ನೆ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 1009 ಫಲಾನುಭವಿಗಳಿಗೆ 234.62 ಲಕ್ಷ ರೂ. ಗುರಿ ನಿಗದಿಪಡಿಸಲಾಗಿತ್ತು. ಈ ಮಾಹೆವರೆಗೂ ಒಟ್ಟು 445 ಫಲಾನುಭವಿಗಳಿಗೆ 117.84 ಲಕ್ಷ ರೂ. ಸಾಲವನ್ನು ವಿತರಣೆ ಮಾಡಲಾಗಿದ್ದು, ಶೇ. 51 ರಷ್ಟು ಆರ್ಥಿಕ ಪ್ರಗತಿಯನ್ನು ಸಾಧಿಸಲಾಗಿದೆ ಎಂದರು. 2016ನೆ ಸಾಲಿನಲ್ಲಿ ಒಟ್ಟು ರೂ. 7,64,900 ಸಾಲ ಮರುಪಾವತಿಯಾಗಿದೆ. ವಿವಿಧ ಯೋಜನೆಗಳಡಿ ಸಾಲ ಬಾಕಿ ಉಳಿಸಿಕೊಂಡಿದ್ದ 2,332 ಫಲಾನುಭವಿಗಳಿಗೆ ರೂ. 2,81,70,293 ನ್ನು ಸಾಲ ಮನ್ನಾ ಮಾಡಲಾಗಿದೆ ಎಂದು ಡಾ.ಎಸ್.ವೈ.ಎಂ. ಮಸೂದ್ ಫೌಜ್ದ್ದಾರ್ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಸುರಯ್ಯೆ ಅಬ್ರಾರ್, ಕರ್ನಾಟಕ ರಾಜ್ಯ ಮದ್ಯಪಾನ ಮಂಡಳಿ ನಿರ್ದೇಶಕ ಯಾಕುಬ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ನಾಗೇಂದ್ರ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.