ಕೃಷಿ ವಿಜ್ಞಾನಿಗಳೊಂದಿಗೆ ರೈತರು ಮುಕ್ತರಾಗಿರಿ: ಸೈಲ್
ಕಾರವಾರ, ಜೂ.18: ಕೃಷಿ ಅಭಿಯಾನ ‘ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕೃಷಿ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡ ಕೃಷಿ ಮಾಹಿತಿ ರಥಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಶಾಸಕ ಸತೀಶ್ ಸೈಲ್ ಶನಿವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕೃಷಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷದ ವಿಷಯ. ಕಾರವಾರ ಹೋಬಳಿ ಮಟ್ಟದಲ್ಲಿ ಮೂರು ದಿನಗಳ ಕಾರ್ಯಕ್ರಮವಿದೆ. ಈ ಮೂರು ದಿನಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು
ಕೃಷಿ ವಿಜ್ಞಾನಿಗಳೊಂದಿಗೆ ರೈತರ ಸಂವಾದ ಕಾರ್ಯಕ್ರಮದಲ್ಲಿ ರೈತರು ಮುಕ್ತವಾಗಿ ಭಾಗವಹಿಸಿ ತಮ್ಮ ಸಂದೇಹಗಳನ್ನು ಬಗೆಹರಿಸಿಕೊಳ್ಳ್ಳಬೇಕು. ಮಣ್ಣಿನ ಪರೀಕ್ಷೆ ಬಗ್ಗೆ ತಿಳಿದು ಯಾವ ಮಣ್ಣಿಗೆ ಯಾವ ಬೆಳೆ ಸೂಕ್ತ ಎಂಬುದನ್ನು ತಿಳಿದುಕೊಂಡು ಕೃಷಿಕರು ಲಾಭ ಮತ್ತು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಬಂಟದೇವ ಕಲಾ ತಂಡದ ಕಲಾವಿದರು ರೈತರಲ್ಲಿ ಜಾಗೃತಿ ಮೂಡಿಸುವ ಗೀತೆಗಳನ್ನು ಹಾಡಿ ಎಲ್ಲರನ್ನು ಹುರಿದುಂಬಿಸಿದರು. ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸುವ ಈ ಕಾರ್ಯಕ್ರಮ ಜಿಲ್ಲೆಯ 20 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಗಳಲ್ಲಿ ಮುಂದಿನ 10 ದಿನಗಳ ಕಾಲ ನಡೆಯಲಿದೆ.
ಈ ಸಂದರ್ಭ ನಗರಸಭೆ ಅಧ್ಯಕ್ಷರು, ತಾಲೂಕು ಪಂಚಾಯತಿ ಅಧ್ಯಕ್ಷರು, ಕೃಷಿ ಇಲಾಖೆ ಜಂಟಿ ನಿರ್ದೇಶಕರು, ವಿವಿಧ ಇಲಾಖೆಗಳ ಅಧಿಕಾರಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.