ಶಿವಮೊಗ್ಗ: ಕಾಗೋಡು ಬೆಂಬಲಿಗರಲ್ಲಿ ಹೊಸ ಹುರುಪು
ಶಿವಮೊಗ್ಗ, ಜೂ. 18: ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪನವರು ಸಚಿವ ಸಂಪುಟಕ್ಕೆ ಸೇರ್ಪಡೆಯಾಗುತ್ತಿರುವ ವಿಷಯವು ಅವರ ಸ್ವಕ್ಷೇತ್ರ ಸಾಗರ ತಾಲೂಕಿನ ಬೆಂಬಲಿಗರಲ್ಲಿ ಅತೀವ ಸಂತಸ ಉಂಟು ಮಾಡಿದ್ದು, ಅತ್ಯಂತ ಹುರುಪಿನಲ್ಲಿರುವುದು ಕಂಡುಬರುತ್ತಿದೆ. ಮತ್ತೊಂದೆಡೆ ಸಚಿವ ಸ್ಥಾನದಿಂದ ಕಿಮ್ಮನೆ ರತ್ನಾಕರ್‌ರವರು ಕೆಳಗಿಳಿದಿರುವ ಸಂಗತಿ ಅವರ ಬೆಂಬಲಿಗರಲ್ಲಿ ತೀವ್ರ ನೋವುಂಟು ಮಾಡುವ ಜೊತೆಗೆ ವೌನಕ್ಕೆ ಶರಣಾಗುವಂತೆ ಮಾಡಿದೆ. ಸರಕಾರ ಅಸ್ತಿತ್ವಕ್ಕೆ ಬಂದಾಗಲೇ ಕಾಗೋಡು ತಿಮ್ಮಪ್ಪನವರು ಸಚಿವ ಸಂಪುಟಕ್ಕೆ ಸೇರ್ಪಡೆಯಾಗಬೇಕಾಗಿತ್ತು. ಆದರೆ ರಾಜಕೀಯ ಕಾರಣಗಳಿಂದ ಅವರು ಸಚಿವರಾಗಲು ಸಾಧ್ಯವಾಗಲಿಲ್ಲ. ಸ್ಪೀಕರ್ ಹುದ್ದೆ ಅಲಂಕರಿಸುವಂತಾಯಿತು. ಇದು ಸರ್ವೇ ಸಾಮಾನ್ಯವಾಗಿ ಬೆಂಬಲಿಗರಲ್ಲಿ ತೀವ್ರ ನೋವುಂಟು ಮಾಡಿತ್ತು.
ಸಚಿವರಾಗುವ ವಿಶ್ವಾಸ ಹೊಂದಿದ್ದ ಕಾಗೋಡು ಬೆಂಬಲಿಗರಿಗೆ ಇದೀಗ ಅವರು ಸಚಿವರಾಗುವ ಸಾಧ್ಯತೆಯ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿರುವುದು ತೀವ್ರ ಸಂತಸ ಉಂಟು ಮಾಡಿದೆ ಎಂದು ಸಾಗರ ತಾಲೂಕಿನ ಕಾಗೋಡು ಆಪ್ತ ಬೆಂಬಲಿಗರೊಬ್ಬರು ಹೇಳಿದ್ದಾರೆ. ಕಾಗೋಡು ತಿಮ್ಮಪ್ಪನವರು ಸ್ಪೀಕರ್ ಸ್ಥಾನದಲ್ಲಿದ್ದುದರಿಂದ ಪಕ್ಷದ ಸಂಘಟನೆ ಹಾಗೂ ರಾಜಕೀಯ ಚಟುವಟಿಕೆಯಿಂದ ದೂರ ಉಳಿಯುವಂತಾಗಿತ್ತು. ಜಿಲ್ಲೆಯಲ್ಲಿರುವ ಅತಿರಥ-ಮಹಾರಥ ಬಿಜೆಪಿ ಮುಖಂಡರಿಗೆ ಸವಾಲು ಹಾಕಿ ಪಕ್ಷ ಸಂಘಟನೆ ಮಾಡುವ ಸಾಮರ್ಥ್ಯ ಕಾಗೋಡು ಅವರಿಗೆ ಇದೆ. ಇದೀಗ ಅವರು ಸಚಿವರಾಗಿ ಮತ್ತೆ ನೇರವಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡರೆ, ಜಿಲ್ಲೆಯ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ಬರಲಿದೆ. ಪರಿಣಾಮಕಾರಿಯಾಗಿ ಪಕ್ಷದ ಸಂಘಟನೆ ಸಾಧ್ಯವಾಗಲಿದೆ ಎಂದು ಮತ್ತೋರ್ವ ಬೆಂಬಲಿಗ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ವೌನಕ್ಕೆ ಶರಣು: ‘ಸಚಿವ ಸಂಪುಟದಲ್ಲಿದ್ದ ಬೆರಳೆಣಿಕೆಯ ನಿಷ್ಕಳಂಕ, ಪ್ರಾಮಾಣಿಕ, ದಕ್ಷ ಸಚಿವರಲ್ಲಿ ಕಿಮ್ಮನೆ ರತ್ನಾಕರ್‌ರವರು ಕೂಡ ಓರ್ವರಾಗಿದ್ದರು. ಅತ್ಯಂತ ಜವಾಬ್ದಾರಿ, ಪ್ರಾಮಾಣಿಕತೆಯಿಂದ ಸಚಿವ ಸ್ಥಾನ ನಿರ್ವಹಣೆ ಮಾಡುತ್ತಿದ್ದರು. ಇಂತಹ ಮೇರು ವ್ಯಕ್ತಿತ್ವದವರನ್ನು ಮುಖ್ಯಮಂತ್ರಿಯವರು ಸಚಿವ ಸಂಪುಟದಲ್ಲಿಟ್ಟುಕೊಳ್ಳಬೇಕಾಗಿತ್ತು. ಇದರಿಂದ ಸರಕಾರಕ್ಕೆ ಒಳ್ಳೆಯ ಹೆಸರು ಬರುತ್ತಿತ್ತು. ಆದರೆ, ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿರುವುದು ಸರಿಯಲ್ಲ. ಇದು ರಾಜ್ಯದ ಜನತೆಗೆ ತಪ್ಪುಸಂದೇಶ ರವಾನಿಸಿದಂತಾಗಿದೆ ಎಂದು ತೀರ್ಥಹಳ್ಳಿಯ ಕಿಮ್ಮನೆ ರತ್ನಾಕರ್‌ರವರ ಬೆಂಬಲಿಗರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ರಾಜಕಾರಣ ಸೇರಿದಂತೆ ಯಾವುದೇ ಕ್ಷೇತ್ರಗಳಲ್ಲಿ ಪ್ರಾಮಾಣಿಕರಾಗಿರುವುದೆ ದೊಡ್ಡ ತಪ್ಪುಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಿಮ್ಮನೆ ರತ್ನಾಕರ್‌ರವರೇ ಉತ್ತಮ ನಿದರ್ಶನ. ಯಾವುದೇ ಲಾಬಿ, ಪ್ರಭಾವ ಬೀರದೆ ತಮ್ಮ ಪಾಡಿಗೆ ತಾವು ಪ್ರಾಮಾಣಿಕರಾಗಿ ಕೆಲಸ ಮಾಡಿಕೊಂಡಿದ್ದ ಕಿಮ್ಮನೆ ರತ್ನಾಕರ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲು ನಿರ್ಧರಿಸಿರುವುದು ಎಷ್ಟು ಸಮಂಜಸ ಎಂದು ಅವರ ಬೆಂಬಲಿಗರು ಪ್ರಶ್ನಿಸಿದ್ದು, ಪ್ರಭಾವಿ, ಲಾಬಿ, ಜಾತಿ ರಾಜಕಾರಣ, ಭಿನ್ನಮತ, ಬ್ಲ್ಯಾಕ್‌ಮೇಲ್ ಮಾಡುವವರಿಗೆ ಮಾತ್ರ ಸಚಿವ ಹುದ್ದೆ ಎಂಬ ಸ್ಥಿತಿ ನಿರ್ಮಾಣವಾಗಿದೆ ಇದು ನಿಜಕ್ಕೂ ದುರಂತದ ಸಂಗತಿ ಎಂದು ಜನತೆ ಆಡಿಕೊಳ್ಳುತ್ತಿದ್ದಾರೆ.