ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮುಖ್ಯ ಗುರಿ: ಕಾಗೋಡು
ಸಾಗರ, ಜೂ.18: ಜನರಿಗೆ ಸಿಗಬೇಕಾದ ಅತಿ ಅಗತ್ಯ ಸೇವೆಗಳಲ್ಲಿ ಆರೋಗ್ಯ ಸೇವೆಯೂ ಒಂದು. ಅದನ್ನು ಪ್ರಾಮಾಣಿಕವಾಗಿ ನೀಡಿದಾಗ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪಹೇಳಿದರು.
ಇಲ್ಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಆರೋಗ್ಯ ಪದ್ಧತಿ ಮತ್ತು ಸುಧಾರಣಾ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿರುವ 60 ಅಡಿ ಸಾಮರ್ಥ್ಯವುಳ್ಳ ತಾಯಿ-ಮಗು ಆಸ್ಪತ್ರೆ, ಉಪವಿಭಾಗೀಯ ಆಸ್ಪತ್ರೆಯನ್ನು 150 ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಿಸುವ ಕಾಮಗಾರಿ ಹಾಗೂ ಶಸ್ತ್ರ ಚಿಕಿತ್ಸಾ ಕೊಠಡಿ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ತಾಯಿಮಗು ಆಸ್ಪತ್ರೆಯನ್ನು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇನ್ನು 5 ಕೋಟಿ ರೂ. ಅನುದಾನ ಕೇಳಲಾಗಿದೆ. ಹಣ ಬಿಡುಗಡೆಗೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಉಪವಿಭಾಗೀಯ ಆಸ್ಪತ್ರೆಯನ್ನು 5 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ವೈದ್ಯರ ಕೊರತೆಯನ್ನು ಗಂಭೀರವಾಗಿ ಪರಿಗಣಿಸಿ ಎಂದು ಆರೋಗ್ಯ ಸಚಿವರಿಗೆ ಅನೇಕ ಬಾರಿ ತಿಳಿಸಲಾಗಿದೆ ಎಂದರು. ಈಗ ಸರಕಾರಿ ಆಸ್ಪತ್ರೆಯಲ್ಲಿ ಔಷಧಿಯ ಕೊರತೆ ಇಲ್ಲ. ಬಿಪಿಎಲ್ ಕಾರ್ಡ್‌ದಾರರಿಗೆ ಅಗತ್ಯವಿರುವ ಔಷಧಿಗಳನ್ನು ಆಸ್ಪತ್ರೆಯಲ್ಲಿಯೇ ವಿತರಿಸಬೇಕು. ಒಂದೊಮ್ಮೆ ಅಗತ್ಯವಿರುವ ಔಷಧಿಯನ್ನು ಹೊರಗಿನಿಂದ ತರಿಸಿದರೆ ಅದರ ವೆಚ್ಚವನ್ನು ಆಸ್ಪತ್ರೆಯಲ್ಲಿ ಸಂಗ್ರಹಿಸುವ ಬಳಕೆದಾರರ ವೆಚ್ಚದಲ್ಲಿ ಭರಿಸಬೇಕು. ಒಂದೊಮ್ಮೆ ರೋಗಿಗಳಿಂದ ತರಿಸಿದರೆ ಅಂತಹವರ ವಿರುದ್ಧ ಕ್ರಮ ಜರಗಿಸಲಾಗುತ್ತದೆ ಎಂದು ಎಚ್ಚರಿಸಿದರು. ನಗರಸಭೆ ಅಧ್ಯಕ್ಷ ಆರ್. ಗಣಾಧೀಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಪಂ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಮೂರ್ತಿ, ಸದಸ್ಯರಾದ ಅನಿತಾ ಕುಮಾರಿ, ರಾಜಶೇಖರ್ ಗಾಳಿಪುರ, ಆರ್.ಸಿ. ಮಂಜುನಾಥ್, ತಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಉಪಾಧ್ಯಕ್ಷ ಪರಶುರಾಮ್, ನಗರಸಭೆ ಉಪಾಧ್ಯಕ್ಷ ಐ.ಎನ್.ಸುರೇಶಬಾಬು ಮತ್ತಿತರರು ಉಪಸ್ಥಿತರಿದ್ದರು.