ಸಂಪುಟದಿಂದ ಕೈಬಿಟ್ಟಿದ್ದಕ್ಕೆ ಬಾಬುರಾವ್ ಚಿಂಚನಸೂರು ಗರಂ!
ಬೆಂಗಳೂರು, ಜೂ.19: ರಾಜ್ಯ ಸಚಿವ ಸಂಪುಟದಿಂದ ತಮ್ಮನ್ನು ಕೈಬಿಟ್ಟಿದ್ದಕ್ಕೆ ಮಾಜಿ ಜವಳಿ ಖಾತಾ ಸಚಿವ ಬಾಬುರಾವ್ ಚಿಂಚನಸೂರು ಗರಂ ಆಗಿದ್ದಾರೆ. ಬಹಿರಂಗವಾಗಿಯೇ ತಮ್ಮ ಅಸಮಾದಾನವನ್ನು ಹೊರಹಾಕಿದ್ದಾರೆ.
ತಮ್ಮನ್ನು ಸಚಿವ ಸಂಪುಟದಿಂದ ಕೈಬಿಟ್ಟಿದ್ದರ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ ಬಾಬುರಾವ್ ಚಿಂಚನಸೂರು, ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನನಗೆ ಸಂಬಂಧಿಕರಿಲ್ಲ. ಸಮಾಜವೇ ನನಗೆಲ್ಲಾ. ಕೋಲಿ, ಕಬ್ಬಲಿಗ, ಗಂಗಾಮತ ಸಮಾಜವೇ ನನಗೆ ಮುಖ್ಯ. ನನ್ನನ್ನು ಕೈಬಿಟ್ಟಿದ್ದರಿಂದ ಇಡೀ ಸಮುದಾಯವೇ ಅನಾಥವಾಗಿದೆ. ಇಡೀ ಸಮುದಾಯವೇ ನನ್ನ ಬಗ್ಗೆ ಕಣ್ಣೀರು ಸುರಿಸಿದೆ ಎಂದು ಹೇಳಿದ್ದಾರೆ.
ಖರ್ಗೆ ವಿಶ್ವ ಕಂಡ ಎರಡನೇ ಅಂಬೇಡ್ಕರ್. ನನ್ನನ್ನು ಮುಂದುವರೆಸಿಕೊಂಡು ಹೋಗುವಂತೆ ಖರ್ಗೆ ಅವರು ಹೈಕಮಾಂಡ್‌ಗೆ ಶಿಫಾರಸ್ಸು ಮಾಡಿದ್ದರು. ಆದರೂ ನನ್ನನ್ನು ಸಂಪುಟದಿಂದ ಕೈಬಿಡಲಾಗಿದೆ. ನಾನು 5 ಬಾರಿ ಗೆದ್ದು ಬಂದಿದ್ದೇನೆ. 45 ವರ್ಷಗಳ ಕಾಲ ಹೋರಾಟ ಮಾಡಿದ್ದೇನೆ. ಜವಳಿ ಇಲಾಖೆಯಲ್ಲಿ ಕ್ರಾಂತಿಯನ್ನೇ ಮಾಡಿಸಿದ್ದೇನೆ. ಸಿಎಂ, ಖರ್ಗೆಗೆ ನನ್ನ ಜನಬೆಂಬಲ ಗೊತ್ತಿದೆ. ನಾನು ಯಾರಿಂದಲೂ ಕಿಕ್‌ಬ್ಯಾಕ್ ಪಡೆದಿಲ್ಲ. ಯಾರೂ ನನ್ನ ಖಾತೆಗೆ ಹಣ ಜಮಾ ಮಾಡಿಲ್ಲ. ಆದರೂ ನನ್ನನ್ನು ಸಂಪುಟದಿಂದ ಕೈಬಿಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.