×
Ad

19 ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಾಬಲ್ಯ: ಮಧು ಬಂಗಾರಪ್ಪ ವಿಶ್ವಾಸ

Update: 2016-06-19 23:27 IST

ಸೊರಬ, ಜೂ.19: ತಾಲೂಕಿನ 19 ಕ್ಷೇತ್ರಗಳಲ್ಲಿ ಅತ್ಯಂತ ಹೆಚ್ಚು ಮತಗಳ ಅಂತರಗಳಿಂದ ವಿಜಯ ಸಾಧಿಸುವ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿಯ ಇಬ್ಬರು ಮಾಜಿ ಸಚಿವರಿಗೆ ಗಂಟುಮೂಟೆ ಕಟ್ಟಿಸಲು ತಾಲೂಕಿನ ಪ್ರಜ್ಞಾವಂತ ಮತದಾರರು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಮಧು ಬಂಗಾರಪ್ಪ ಭವಿಷ್ಯ ನುಡಿದರು.

ರವಿವಾರ ತಾಲೂಕಿನ ಹೆಗ್ಗೋಡು ಗ್ರಾಮದಲ್ಲಿ ತಾಪಂ ಅಭ್ಯರ್ಥಿ ಪರ ಮತಯಾಚಿಸಿ, ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

 ಅಭಿವೃದ್ಧಿಯಲ್ಲಿ ಶೂನ್ಯ ಸಂಪಾದನೆ ಮಾಡಿದ ಕಾಂಗ್ರೆಸ್‌ನ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹಾಗೂ ಬಿಜೆಪಿಯ ಹರತಾಳು ಹಾಲಪ್ಪನವರಿಗೆ ಕಳೆದ ಜಿಪಂ ಚುನಾವಣೆಯಲ್ಲಿ ತಾಲೂಕಿನ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಈ ಬಾರಿಯ ತಾಪಂನ 19 ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸುವ ಮೂಲಕ ರಾಜಕಾರಣದಿಂದಲೇ ಅವರನ್ನು ಹೊರಹಾಕಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರನ್ನು ತಾಲೂಕಿನ ಜನತೆ ರಾಜ್ಯ ಹಾಗೂ ರಾಷ್ಟ್ರ ನಾಯಕರನ್ನಾಗಿ ಮಾಡಿದ್ದರು. ತಾಲೂಕಿನ ಜನತೆಯ ಅಭಿಪ್ರಾಯ ಹಾಗೂ ಮುಖಂಡರ ಅಪೇಕ್ಷೆಯಂತೆ ನಿಷ್ಠಾವಂತ ಹಾಗೂ ಯುವಕರನ್ನು ತಾಪಂ ಚುನಾವಣಾ ಕಣಕ್ಕೆ ಇಳಿಸಲಾಗಿದೆ. ತಾಲೂಕಿನಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಜಿಪಂ ನಡೆದು, ಕೆಲವೇ ತಿಂಗಳುಗಳಲ್ಲಿ ಅನುದಾನದ ಕೊರತೆ ಇದ್ದರೂ ಸಹ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕುಡಿಯುವ ನೀರು ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯಗಳನ್ನು ತ್ವರಿತಗತಿಯಲ್ಲಿ ಜಿಪಂ ಸದಸ್ಯರು ಮಾಡಿ, ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಇವರ ಕಾರ್ಯವೈಖರಿ ತಾಪಂ ಚುನಾವಣೆಗೆ ಸಹಕಾರಿಯಾಗಲಿದೆ. ಜೆಡಿಎಸ್ ಎಲ್ಲಾ ಸಮುದಾಯದ ಅಭ್ಯರ್ಥಿಗಳನ್ನು ಚುನಾ ವಣೆಗೆ ಸ್ಪರ್ಧೆಗೆ ಇಳಿಸುವ ಮೂಲಕ ಜಾತ್ಯತೀತ ಪಕ್ಷವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ಉತಮ ನಿದರ್ಶನ ಎಂದರೆ ಶಿಗ್ಗಾ ತಾಪಂ ಕ್ಷೇತ್ರಕ್ಕೆ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ ಜನಾಂಗದ ಕೆಲವೇ ಕೆಲವು ಮತಗಳು ಇದ್ದರೂ ಸಹ ನಿಷ್ಠಾವಂತ ಕಾರ್ಯಕರ್ತ ಸೈಯದ್ ಸಿರಾಜ್‌ಗೆ ಅವಕಾಶ ನೀಡಲಾಗಿದೆ. ಜಾತಿ ಭೇದವಿಲ್ಲದೆ ಅವರನ್ನು ಕ್ಷೇತ್ರದ ಜನತೆ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಭ್ಯರ್ಥಿ ನಯನಾ ಹೆಗಡೆ ಮಾತನಾಡಿ, ನಾನು ಸ್ಪರ್ಧಿಸುತ್ತಿರುವುದು ಬಂಗಾರಪ್ಪನವರ ಆಶೀರ್ವಾದದಿಂದ. ತಾಲೂಕಿನ ಶಾಸಕರು ಆಡಳಿತ ಪಕ್ಷದಲ್ಲಿ ಇಲ್ಲದಿದ್ದರೂ ತಾಲೂಕಿನ ಅಭಿವೃದ್ಧಿ ಮಾಡಿದ್ದಾರೆ. ತಾಲೂಕಿನ ಇನ್ನೂ ಹೆಚ್ಚಿನ ಅಭಿವೃದ್ಧಿ ಆಗಬೇಕು ಎಂದರೆ ಎಲ್ಲಾ 19 ತಾಪಂ ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಬೆಂಬಲಿಸಿ, ಶಾಸಕರ ಕೈ ಬಲಪಡಿಸಲು ಸ್ಪರ್ಧಿಸಿರುವ ನನಗೆ ಹಾಗೂ ಉಳಿದ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೂ ಮತ ನೀಡುವ ಮೂಲಕ ಜಯಗಳಿಸುವಂತೆ ಮತಯಾಚಿಸಿದರು. ಸಭೆಯಲ್ಲಿ ಜಿಪಂ ಸದಸ್ಯೆ ತಾರಾ ಶಿವಾನಂದ, ಮುಖಂಡರಾದ ಎಚ್.ಗಣಪತಿ, ಶ್ರೀಪಾದ ಹೆಗಡೆ ನಿಸರಾಣಿ, ನಿಂಗಪ್ಪ ಬರಗಿ, ಬಸವೇಶ್ವರ, ಲಿಂಗರಾಜ ಗೌಡ, ಜಗದೀಶ ಕುಪ್ಪೆ, ಮತ್ತಿತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News