‘ರೈತರಲ್ಲಿ ಜಾಗೃತಿ ಮೂಡಿಸಲು ಕೃಷಿ ಅಭಿಯಾನ ಅಗತ್ಯ:ರಂಜನ್ ಅಜಿತ್ ಕುಮಾರ್
ಮೂಡಿಗೆರೆ, ಜೂ.19: ಹವಾಮಾನ ವೈಪರೀತ್ಯದಿಂದ ರೈತರು ಮತ್ತು ಬೆಳೆಗಾರರು ಕಂಗಾಲಾಗಿದ್ದಾರೆ. ಸಾಗುವಳಿ ಜಮೀನಿನಲ್ಲಿ ಗರಿಷ್ಠ ಕೃಷಿ ಉತ್ಪಾದನೆಯನ್ನು ಪಡೆಯುವುದು ಆವಶ್ಯಕವಾಗಿದೆ. ಬೆಳೆ ವೈವಿದ್ಧೀಕರಣ, ವ್ಯವಸಾಯ ವೆಚ್ಚದಲ್ಲಿ ಕಡಿತ, ಕೃಷಿಯೊಂದಿಗೆ ಪೂರಕ ಉಪ ಕಸುಬುಗಳಾದ ಪಶುಸಂಗೋಪನೆ, ರೇಷ್ಮೆ ಕೃಷಿ, ಮೀನುಗಾರಿಕೆಯಂತಹ ಕಸುಬುಗಳನ್ನು ಅಳವಡಿಸಿಕೊಳ್ಳಲು ಕೃಷಿ ಅಭಿಯಾನ ಅತ್ಯಗತ್ಯವಾಗಿದೆ ಎಂದು ತಾಪಂ ಸದಸ್ಯ ರಂಜನ್ ಅಜಿತ್ ಕುಮಾರ್ ಅಭಿಪ್ರಾಯಿಸಿದರು.
ಅವರು ಪಟ್ಟಣದ ತಾಪಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೃಷಿ ಇಲಾಖೆ ಪ್ರಸಕ್ತ ಪರಿಸ್ಥಿತಿಯನ್ನು ಮನಗಂಡು, ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವಶ್ಯವಿರುವ ತಂತ್ರಜ್ಞಾನವನ್ನು ತಲುಪಿಸುವ ನಿಟ್ಟಿನಲ್ಲಿ ಏಕಗವಾಕ್ಷಿ ವಿಸ್ತರಣಾ ಪದ್ಧತಿಯಲ್ಲಿ ಸಮಗ್ರ ಕೃಷಿ ಮಾಹಿತಿಯನ್ನು ನೀಡಲಾಗುತ್ತಿದೆ. ವಿವಿಧ ಅಭಿವೃದ್ಧಿ ಇಲಾಖೆಗಳ ಸಮನ್ವಯದೊಂದಿಗೆ ಸಮೂಹ ಜಾಗೃತಿ ಕಾರ್ಯಕ್ರಮವಾದ ಕೃಷಿ ಅಭಿಯಾನದ ಮುಖಾಂತರ ತಾಲೂಕಿನ ಗ್ರಾಪಂನಲ್ಲಿ ಸಂವಾದ ಕಾರ್ಯಕ್ರಮ, ಚರ್ಚೆಗಳನ್ನು ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ. ರೈತರು ಮತ್ತು ಬೆಳೆಗಾರರು ಇದರ ಉಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಚಂದ್ರಶೇಖರ್ ಮಾಹಿತಿ ನೀಡಿ, ಕೃಷಿ ರಥವು ತಾಲೂಕಿನ ಬಣಕಲ್ ಹೋಬಳಿಯಲ್ಲಿ ಜೂ.18 ರಿಂದ ಜೂ.20 ರವರೆಗೆ ಸಂಚರಿಸಲಿದೆ. ಜೂ.20 ರಿಂದ 23 ರವರೆಗೆ ಗೋಣಿಬೀಡು ಹೋಬಳಿಯಲ್ಲಿ ಸಂಚರಿಸಿ ನಂತರ ಜೂ.22 ರಿಂದ 24 ರವರಗೆ ಕಸಬಾದಲ್ಲಿ ಸಂಚರಿಸಲಿದೆ. ಜೂ.24 ರಿಂದ 26 ರವರಗೆ ಕಳಸ ಹೋಬಳಿ, ಜೂ.26 ರಿಂದ 28 ರವರಗೆ ಜಾವಳಿ ಗ್ರಾಮದಲ್ಲಿ ಸಂಚರಿಸಲಿದೆ ಎಂದು ನುಡಿದರು.
ಜೂ.20 ರಂದು ಬಣಕಲ್ ಗ್ರಾಪಂ ಸಭಾಂಗಣ, ಜೂ.23 ರ ರಂದು ಗೋಣಿಬೀಡು ಗ್ರಾಪಂ ಆವರಣ, ಜೂ.24 ರಂದು ಮೂಡಿಗೆರೆ ಜೇಸಿ ಭವನ, ಜೂ.26 ರಂದು ರೋಟರಿ ಸಭಾಂಗಣ ಕಳಸ, ಜೂ.28 ರಂದು ಜಾವಳಿ ಗ್ರಾಪಂ ಸಮುದಾಯ ಭವನದಲ್ಲಿ ರೈತ ಸಂವಾದ ನಡೆಯಲಿದೆ. ರೈತರು ಮತ್ತು ಬೆಳೆಗಾರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಕೊಡುವಂತೆ ಮನವಿಮಾಡಿದರು.
ಈ ಸಂದರ್ಭದಲ್ಲಿ ಕೃಷಿಕ್ ಸಮಾಜದ ಅಧ್ಯಕ್ಷ ಡಿ.ಎಲ್.ಅಶೋಕ್ ಕುಮಾರ್, ಗೌರವ ಕಾರ್ಯದರ್ಶಿ ಪಟ್ಟದೂರಿನ ಪಿ.ಕೆ.ನಾಗೇಶ್, ದೇವರಾಜ್, ಸವಿತಾ ರಮೇಶ್, ಪಂಚಾಕ್ಷರಿ, ಡಿಡಿಎ ಕೆ.ಆರ್.ಲೋಕೇಶ್, ಕೃಷಿ ಅಧಿಕಾರಿಗಳಾದ ಲೋಲಾಕ್ಷಿ, ಎಂ.ಕೆ.ಪುಟ್ಟಸ್ವಾಮಿ ಉಪಸ್ಥಿತರಿದ್ದರು.