ಪ್ರತಿ ಹನಿ ನೀರು ಅಮೂಲ್ಯ: ಜಯಪ್ಪ
ಕಡೂರು, ಜೂ.19: ಇಂದಿನದಿನಗಳಲ್ಲಿ ಪ್ರತೀ ಹನಿ ನೀರು ಅತೀ ಅಮೂಲ್ಯವಾಗಿದೆ ಎಂದು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಯಪ್ಪ ಹೇಳಿದರು.
ಅವರು ಪಟ್ಟಣದ ಸರಕಾರಿ ಪಿಯು ಕಾಲೇಜು ಆವರಣದಲ್ಲಿನ ನಬಾರ್ಡ್, ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಹಾಗೂ ಕಾಲೇಜು ಸಹಯೋಗದಲ್ಲಿ ಏರ್ಪಡಿಸಿದ್ದ ನೀರು ಉಳಿಸಿ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಜೀವರಾಶಿಗಳಿಗೂ ನೀರು ಅವಶ್ಯವಾಗಿದೆ. ನೀರಿಲ್ಲದೆ ಯಾರೂ ಬದುಕಲು ಸಾಧ್ಯವಿಲ್ಲ. ಇಂತಹ ಅಮೂಲ್ಯ ಸಂಪತ್ತು ಅನಾವಶ್ಯಕವಾಗಿ ಪೋಲಾಗುತ್ತಿದೆ. ಇದನ್ನು ತಡೆಗಟ್ಟಿ ಸದುಪಯೋಗಪಡಿಸುವ ಕಾರ್ಯವಾಗಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ಯೋಜನಾ ನಿರ್ದೇಶಕ ರಘು ಮಾತನಾಡಿ, ನಾವು ನಮಗೆ ಅಗತ್ಯಕ್ಕಿಂತ ಹೆಚ್ಚಿನ ನೀರನ್ನು ಬಳಸುತ್ತಿದ್ದೇವೆ. ಮಳೆಗಾಲದಲ್ಲೂ ಮಳೆಯ ನೀರು ಹರಿದು ಹೋಗುತ್ತಿದ್ದರೂ ಅದನ್ನು ಮಳೆಕೊಯ್ಲು ವಿಧಾನದ ಮೂಲಕ ಸಂರಕ್ಷಿಸುತ್ತಿಲ್ಲ. ಇದರಿಂದ ಅಂತರ್ಜಲಮಟ್ಟವು ಕಡಿಮೆಯಾಗುತ್ತಿದ್ದು, ಮುಂದಿನದಿನಗಳಲ್ಲಿ ಹನಿ ನೀರಿಗೂ ಜನ ಜಾನುವಾರುಗಳು ಪರದಾಡುವಂತಹ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಈಗಲೇ ಈ ಬಗ್ಗೆ ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.
ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಅನುರಾಧ ನರಹರಿ ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ಮಳೆ ನೀರು ಸಂರಕ್ಷಣೆ ಹಾಗೂ ಬ್ಯಾಂಕಿನಲ್ಲಿ ಖಾತೆ ತೆರೆಯುವ ಕುರಿತು ಹಾಗೂ ಸರಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಈ ಸಂದಭರ್ದಲ್ಲಿ ನೀರು ಉಳಿಸಿ ಆಂದೋಲನಕ್ಕೆ ಸಂಬಂಧಿಸಿದಂತೆ ಕರಪತ್ರವನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಮಹದೇವಯ್ಯ, ಭೂಮಿ ಸಂಸ್ಥೆಯ ಯೋಜನಾ ನಿರ್ದೇಶಕ ರವಿ ಮತ್ತಿತರರು ಉಪಸ್ಥಿತರಿದ್ದರು.