×
Ad

ಜೂ.25ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಪ್ರತಿಭಟನೆ

Update: 2016-06-19 23:32 IST

ಚಿಕ್ಕಮಗಳೂರು, ಜೂ.19: ಸಂಕಷ್ಟದಲ್ಲಿರುವ ತೆಂಗು ಮತ್ತು ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಒತ್ತಾಯಿಸಿ ಜೂ.25ರಂದು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ರೈತಸಂಘದ ರಾಜ್ಯ ಕಾರ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ತಿಳಿಸಿದರು.

 ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರಕಾರಗಳು ತೆಂಗು ಮತ್ತು ಅಡಿಕೆ ಬೆಳೆಗಾರರನ್ನು ರಕ್ಷಿಸುವ ಗುರುತರ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದು, ಸರಕಾರಗಳನ್ನು ಎಚ್ಚರಿಸುವ ಉದ್ದೇಶದಿಂದ ಈ ಪ್ರತಿಭಟನಾ ಸಮಾವೇಶವನ್ನು ಆಯೋಜಿಸಲಾಗಿದೆ.ರಾಜ್ಯದ 12 ಜಿಲ್ಲೆಗಳ 1.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 12ಕೋಟಿ ತೆಂಗಿನ ಮರಗಳನ್ನು ಬೆಳೆಯಲಾಗಿದೆ. ಇಳುವರಿಯಲ್ಲಿ ಕಡಿತ, ತೆಂಗು ಮತ್ತು ಕೊಬ್ಬರಿ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೀಡಾಗಿದ್ದು, ಅವರ ರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಬರುತ್ತಿಲ್ಲ. ಇದರಿಂದ ರೈತರು ಆತ್ಮಹತ್ಯೆಯತ್ತ ಮನಸ್ಸು ಮಾಡುತ್ತಿದ್ದಾರೆ ಎಂದು ಹೇಳಿದರು.

ತೆಂಗು ಮತ್ತು ಅಡಿಕೆ ಮಂಡಳಿ ಸ್ಥಾಪಿಸಿ ಸ್ಥಿರ ಬೆಲೆ ಕಾಪಾಡಲು ನೀತಿ ರೂಪಿಸುವುದು. ಆವರ್ತನಿಧಿ ಸ್ಥಾಪನೆ ಮಾಡುವುದು. ಅಡಿಕೆ ಕ್ವಿಂಟಾಲೊಂದಕ್ಕೆ 35ರಿಂದ 45ಸಾವಿರ ಸ್ಥಿರ ಬೆಲೆ ಇರುವಂತೆ ನೋಡಿಕೊಳ್ಳುವುದು. ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದು ತೆಂಗಿನ ಮರಗಳಿಂದ ನೀರಾ ಇಳಿಸಲು ಅನುಮತಿ ನೀಡಬೇಕು. ನೀರಾದ ಉಪ ಉತ್ಪನ್ನಗಳಾದ ಬೆಲ್ಲ ಚಾಕಲೇಟ್, ಸಕ್ಕರೆ ತಯಾರಿಕೆಗೆ ರಾಜ್ಯ ಸರಕಾರ ಪೋತ್ಸಾಹ ನೀಡಬೇಕೆಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಗುವುದು ಎಂದರು.

ತೆಂಗು ಮತ್ತು ಅಡಿಕೆ ಮರಗಳನ್ನು ರಕ್ಷಿಸಲು ಹನಿ ನೀರಾವರಿ ಯೋಜನೆಗೆ ಒತ್ತು ನೀಡಿ ಎಲ್ಲಾ ವರ್ಗದ ರೈತರಿಗೆ ಶೇ.90ರಷ್ಟು ಸಹಾಯಧನ ನೀಡುವುದು. ತೆಂಗು ಮತ್ತು ಅಡಿಕೆ ಮರಗಳಿಗೆ ಬರುವ ರೋಗಗಳನ್ನು ತಡೆಗಟ್ಟಲು ಮತ್ತು ಇಳುವರಿ ಹೆಚ್ಚು ಮಾಡಲು ನೈಸರ್ಗಿಕ ಕೃಷಿಗೆ ಒತ್ತು ನೀಡಬೇಕು. ಎಳೆನೀರು ಮತ್ತು ಮಜ್ಜಿಗೆ ಸಂಸ್ಕರಣ ಘಟಕಗಳನ್ನು ಸ್ಥಾಪಿಸಬೇಕೆಂದು ಒತ್ತಾಯಿಸಲಾಗುವುದು ಎಂದು ಹೇಳಿದರು.

ತೆಂಗು, ಅಡಿಕೆ ಮತ್ತು ಸಕ್ಕರೆಯನ್ನು ಯಾವುದೇ ನಿರ್ಬಂಧವಿಲ್ಲದೆ ಆಮದು ವಾಡಿಕೊಳ್ಳುತ್ತಿರುವುದರಿಂದ ಭಾರತದಲ್ಲಿ ಉತ್ಪನ್ನವಾಗುತ್ತಿರುವ ದೇಶಿ ಉತ್ಪನ್ನಗಳಿಗೆ ಕೊಡಲಿಪೆಟ್ಟು ಬೀಳುತ್ತಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆಮದು ನಿಯಂತ್ರಣ ಮಾಡುವುದು. ಆಮದು ಶುಲ್ಕ ಹೆಚ್ಚಿಸುವುದರಿಂದ ಅನಧಿಕೃತ ಆಮದನ್ನು ನಿರ್ಬಂಧಿಸಬಹುದಾಗಿದೆ.ಆ ನಿಟ್ಟಿನಲ್ಲಿ ಸರಕಾರಗಳು ಚಿಂತನೆ ನಡೆಸಬೇಕಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಅಧ್ಯಕ್ಷ ಪುಟ್ಟಸ್ವಾಮಿಗೌಡ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News