×
Ad

ಇಂದು ಚಿತ್ರೋದ್ಯಮ ಬಂದ್‌ಗೆ ಕರೆ

Update: 2016-06-19 23:33 IST

ಬೆಂಗಳೂರು, ಜೂ.19: ರಾಜ್ಯ ಸಚಿವ ಸಂಪುಟ ಪುನಾರಚನೆೆಯಲ್ಲಿ ವಸತಿ ಸಚಿವ ಅಂಬರೀಷ್‌ರನ್ನು ಕೈ ಬಿಟ್ಟಿರುವುದಕ್ಕೆ ಕನ್ನಡ ಚಿತ್ರರಂಗ ಭಾರೀ ವಿರೋಧವನ್ನು ವ್ಯಕ್ತಪಡಿಸಿದ್ದು, ಜೂ.20ರಿಂದ ಚಿತ್ರೋದ್ಯಮ ಬಂದ್‌ಗೆ ಕರೆ ನೀಡಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಹಲವು ಕನ್ನಡ ಚಿತ್ರರಂಗದ ಗಣ್ಯರು, ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಒಕ್ಕೊರಲಿನಿಂದ ಆಕ್ರೋಶ ವ್ಯಕ್ತಪಡಿಸಿದರು.
ನಿರ್ಮಾಪಕ ಎ.ಗಣೇಶ್ ಮಾತನಾಡಿ, ನಟರಾಗಿದ್ದ ಅಂಬರೀಷ್‌ರನ್ನು ಸಂಪುಟದಿಂದ ಕೈ ಬಿಟ್ಟಿರುವುದು ಚಿತ್ರರಂಗಕ್ಕೆ ಅತ್ಯಂತ ನೋವು ತಂದಿದೆ. ರಾಜ್‌ಕುಮಾರ್ ಸ್ಥಾನವನ್ನು ತುಂಬಿದ್ದ ನಟ ಅಂಬರೀಷ್ ಆಗಿದ್ದರು. ಆದರೆ, ಇದೀಗ ಸಂಪುಟದಿಂದ ಕೈ ಬಿಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರರಂಗಕ್ಕೆ ಅವಮಾನ ಮಾಡಿದ್ದಾರೆ ಎಂದು ಹೇಳಿದರು.
ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು. ಸಂಪುಟದಿಂದ ಅಂಬರೀಶ್‌ರನ್ನು ಕೈ ಬಿಡಬಾರದು ಎಂದು ಮನವಿ ಮಾಡಿದರು.
   ಕಾರ್ಮಿಕರ ಒಕ್ಕೂಟದಿಂದ ನಾಳೆ ಬಂದ್‌ಗೆ ಕರೆ ನೀಡಲಾಗಿದ್ದು, ಕಲಾವಿದರ ಸಂಘ, ನಿರ್ದೇಶಕರ ಸಂಘ, ಛಾಯಾಗ್ರಾಹಕರ ಸಂಘ ಬಂದ್‌ಗೆ ಬೆಂಬಲ ನೀಡುತ್ತಿದೆ. ಜೂ.20ರಂದು ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಚಿತ್ರರಂಗದ ಎಲ್ಲ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ ಹಾಗೂ ನಾಳೆ ಮಧ್ಯಾಹ್ನ 2 ರಿಂದ 3ರವರೆಗೂ ಫಿಲಂ ಚೇಂಬರ್ ಬಳಿ ಮೌನ ಪ್ರತಿಭಟನೆ ನಡೆಯಲಿದೆ ಎಂದು ನಿರ್ಮಾಪಕ ಭಾ.ಮಾ. ಹರೀಶ್ ಹೇಳಿದರು.
 ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕರಾದ ಎ.ಎಂ.ಸುರೇಶ್, ಎ.ಮಂಜು, ನಿರ್ದೇಶಕ ಮಹೇಶ್ ಸುಖಧರೆ, ಕರಿಸುಬ್ಬು, ಪ್ರಮಿಳಾ ಜೋಷಾಯ್, ನಟ ಯಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News