ಸ್ಪೀಕರ್ ಸ್ಥಾನಕ್ಕೆ ಕಾಗೋಡು ರಾಜೀನಾಮೆ
ಬೆಂಗಳೂರು, ಜೂ. 19: ಸಚಿವ ಸಂಪುಟ ಪುನಾರಚನೆ ಹಿನ್ನೆಲೆಯಲ್ಲಿ ರಾಜ್ಯದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಕಾಗೋಡು ತಿಮ್ಮಪ್ಪ ಅವರು ವಿಧಾನಸಭಾ ಸ್ಪೀಕರ್ ಸ್ಥಾನಕ್ಕೆ ರವಿವಾರ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
ವಿಧಾನಸಭೆ ಉಪ ಸಭಾಧ್ಯಕ್ಷ ಎಚ್.ಎನ್.ಶಿವಶಂಕರ ರೆಡ್ಡಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿರುವ ಸಾಗರ ವಿಧಾನಸಭಾ ಕ್ಷೇತ್ರದ ಕಾಗೋಡು ತಿಮ್ಮಪ್ಪ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ನೂತನವಾಗಿ ಸೇರ್ಪಡೆಗೊಂಡಿದ್ದಾರೆ.
ಬದಲಾವಣೆ ಒಳ್ಳೆಯದಕ್ಕೆ: ಮುಂದಿನ ಎರಡು ವರ್ಷಗಳ ಕಾಲ ಉತ್ತಮ ಆಡಳಿತ ನೀಡುವ ಮೂಲಕ ರಾಜ್ಯ ಸರಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ಪ್ರಯತ್ನಿಸುವೆ. ಬದಲಾವಣೆ ಒಳ್ಳೆಯದಕ್ಕೆ, ಸಚಿವ ಸ್ಥಾನಕ್ಕಿಂತ ಸ್ಪೀಕರ್ ಸ್ಥಾನ ದೊಡ್ಡದು ಎಂದು ಕಾಗೋಡು ತಿಮ್ಮಪ್ಪ ಇದೇ ವೇಳೆ ಪ್ರತಿಕ್ರಿಯಿಸಿದರು.
ಮಂತ್ರಿಯಾದ ಕೂಡಲೇ ಅವರು ದೊಡ್ಡವನು ಎಂಬ ಮನಸ್ಥಿತಿ ಸರಿಯಲ್ಲ. ಸರಕಾರ ಒಳ್ಳೆಯ ರೀತಿ ನಡೆಸಬೇಕು. ಜನಸೇವೆ ಮೂಲಕ ಉತ್ತಮ ಸಾಧನೆ ಮಾಡಬೇಕೆಂದ ಅವರು, ಕಾಂಗ್ರೆಸ್ ಪಕ್ಷದ ಸೂಚನೆಯಿಂದ ಸಚಿವನಾಗುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕಂದಾಯ ಇಲಾಖೆ ಸರಕಾರಕ್ಕೆ ತಾಯಿ ಇಲಾಖೆಯಿದ್ದಂತೆ. ಅಲ್ಲಿಯ ಆಡಳಿತ ಸ್ವಚ್ಛವಾಗಿರಬೇಕು. ಇದರಿಂದ ಜನ ಸಾಮಾನ್ಯರಿಗೆ ನೇರವಾಗಿ ಸಹಾಯ ಮಾಡಲು ಸಾಧ್ಯ ಎಂದ ಅವರು, ರಾಜ್ಯದಲ್ಲಿನ ಬಗರ್ ಹುಕುಂ ಸಾಗುವಳಿದಾರರಿಗೆ ಸಹಾಯ ಮಾಡಬೇಕೆಂಬುದು ನನ್ನ ಬಹುದಿನಗಳ ಆಶಯ. ಒಳ್ಳೆಯ ಕೆಲಸ ಮಾಡುವ ವಿಶ್ವಾಸವಿದೆ ಎಂದು ನುಡಿದರು.
ಫ್ಲ್ಲೆಕ್ಸ್ ಬೇಡ: ಇದೇ ವೇಳೆ ಹೂವಿನ ಹಾರ ಹಾಕಲು ಮುಂದಾದ ಬೆಂಬಲಿಗರ ವಿರುದ್ಧ ಕೆಂಡಾಮಂಡಲರಾದ ಕಾಗೋಡು, ಸ್ಪೀಕರ್ ಸ್ಥಾನ ಎಲ್ಲಕ್ಕಿಂತ ದೊಡ್ಡದು, ನಿಮಗೆ ಬುದ್ಧಿ ಇಲ್ಲವೇ? ಯಾವುದೇ ಕಾರಣಕ್ಕೂ ಫ್ಲ್ಲೆಕ್ಸ್, ಬ್ಯಾನರ್‌ಗಳನ್ನು ಹಾಕದಂತೆ ಬೆಂಬಲಿಗರಿಗೆ ತಾಕೀತು ಮಾಡಿದರು.