×
Ad

3ನೆ ಬಾರಿಗೆ ಬಿ.ಎಲ್.ಶಂಕರ್ ಅಧ್ಯಕ್ಷರಾಗಿ ಆಯ್ಕೆ

Update: 2016-06-19 23:35 IST

ಬೆಂಗಳೂರು, ಜೂ. 19: ಭಾರಿ ಕುತೂಹಲ ಮೂಡಿಸಿದ್ದ ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯಕಾರಿ ಸಮಿತಿ ಚುನಾವಣೆಯ ಫಲಿತಾಂಶ ರವಿವಾರ ಹೊರ ಬಂದಿದ್ದು, ಮೂರನೆ ಬಾರಿಯೂ ಡಾ.ಬಿ.ಎಲ್.ಶಂಕರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ರವಿವಾರ ಬೆಳಗ್ಗೆ 10ರಿಂದ 1ರವರೆಗೆ ಮತದಾನ ಪ್ರಕ್ರಿಯೆ ನಡೆಯಿತು. ಪರಿಷತ್ತಿನ 147 ಸದಸ್ಯರ ಪೈಕಿ 106 ಮಂದಿ ಮತದಾನ ಮಾಡಿದರು. ಮಧ್ಯಾಹ್ನ ನಡೆದ ಸರ್ವ ಸದಸ್ಯರ ಸಭೆಯಲ್ಲಿ ನೂತನ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಸಮಿತಿ ಸದಸ್ಯರನ್ನು ಘೋಷಿಸಲಾಯಿತು. ನಂತರ ನೂತನವಾಗಿ ಆಯ್ಕೆಗೊಂಡವರಿಗೆ ಅಧಿಕಾರ ಹಸ್ತಾಂತರ ನಡೆಯಿತು.
ಭಾರಿ ಕುತೂಹಲ ತಂದಿದ್ದ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿ ಕಲಾವಿದ ಕೆ.ಟಿ.ಶಿವಪ್ರಸಾದ್‌ರನ್ನು ಡಾ.ಬಿ.ಎಲ್.ಶಂಕರ್ 46 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ಈ ಹಿಂದೆಯೂ ಶಂಕರ್ ಅವರು 2013ರಲ್ಲಿ ಅವಿರೋಧವಾಗಿ ಆಯ್ಕೆಗೊಂಡಿದ್ದರು. ಕಲಾವಿದರ ಸಂಸ್ಥೆ ಕಲಾವಿದರಿಗೆ ದಕ್ಕಬೇಕೆಂದು ಕಲಾವಿದ ಕೆ.ಟಿ.ಶಿವಪ್ರಸಾದ್ ಪ್ರಚಾರ ನಡೆಸಿದ್ದರು.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಪ್ರೊ.ಕಮಲಾಕ್ಷಿ ಎಂ.ಜೆ. ಹಾಗೂ ದಿ. ನಂಜುಂಡರಾವ್ ಅವರ ಪುತ್ರ ಎಸ್.ಎನ್. ಶಶಿಧರ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಆದರೆ, ಕೇವಲ 7 ಮತಗಳ ಅಂತರದಲ್ಲಿ ಪ್ರೊ.ಕಮಲಾಕ್ಷಿ ಎಂ.ಜೆ. ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿದ್ದಾರೆ. ಅದೇ ರೀತಿ, ಉಪಾಧ್ಯಕ್ಷರಾಗಿ ಟಿ. ಪ್ರಭಾಕರ್, ಎ.ರಾಮಕೃಷ್ಣಪ್ಪ, ಹರೀಶ್ ಜೆ.ಪದ್ಮನಾಭ ಆಯ್ಕೆಯಾಗಿದ್ದಾರೆ. ಸಹಾಯಕ ಕಾರ್ಯದರ್ಶಿಗಳಾಗಿ ಪ್ರೊ.ಅಪ್ಪಾಜಯ್ಯ ಕೆ.ಎಸ್., ಉಮಾ ಪಾಟೀಲ್ ಆಯ್ಕೆಯಾಗಿದ್ದಾರೆ. ಪರಿಷತ್‌ನಲ್ಲಿ ಮಹತ್ವದ ಸ್ಥಾನವೆಂದು ಪರಿಗಣಿಸಲಾಗಿರುವ ಖಜಾಂಚಿ ಸ್ಥಾನಕ್ಕೆ ಹಾಲಿ ಅಧಿಕಾರದಲ್ಲಿದ್ದ ಡಾ.ಡಿ.ಕೆ. ಚೌಟ ಪುನರಾಯ್ಕೆ ಬಯಸಿ ಕಣಕ್ಕಿಳಿದಿದ್ದರು. ಡಾ. ಲಕ್ಷ್ಮೀಪತಿ ಜಿ, ಶಿವಮಹದೇವನ್ ಎ. ಅವರ ವಿರುದ್ಧ ಚೌಟ ಗೆಲುವು ಸಾಧಿಸಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಿ.ಎನ್. ಸತ್ಯನಾರಾಯಣ, ರಮಾಶರ್ಮಾ, ಪ್ರಭುದೇವ್ ಎಸ್.ಆರಾಧ್ಯ, ವಿನೋದ ಬಿ.ವೈ., ತಾರಕೇಶ್ವರಿ ಟಿ.ವಿ., ವಿಠ್ಠಲ್ ಭಂಡಾರಿ ಕೆ., ಅರುಣ್ ಕುಮಾರ್ ರಾಜ್ ಅರಸ್ ಎ.ಸಿ ನೇಮಕಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News