ಬಡತನ ಹಸಿವಿಗೆ ಅಡ್ಡಿಯಾಗಬಾರದು: ಮುನೀರ್ ಅಹ್ಮದ್
ಚಿಕ್ಕಮಗಳೂರು, ಜೂ.19: ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ಬಡತನ ಹಸಿವಿಗೆ ಅಡ್ಡಿಯಾಗಬಾರದು ಎಂದು ಜುಮಾ ಮಸೀದಿ ಅಧ್ಯಕ್ಷ ಮುನೀರ್ ಅಹ್ಮದ್ ತಿಳಿಸಿದ್ದಾರೆ.
ಅವರು ಇಂದು ನಗರ ಹೊರವಲಯದ ಕಲ್ಲುದೊಡ್ಡಿಯಲ್ಲಿ ಎಸ್‌ವೈಎಸ್ ಹಮ್ಮಿಕೊಂಡಿದ್ದ ರಮಝಾನ್ ಕಿಟ್ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಎಲ್ಲ ದಾನಕ್ಕಿಂತ ವಿದ್ಯಾದಾನ ಹಾಗೂ ಅನ್ನದಾನ ಶ್ರೇಷ್ಠವಾದುದು ಎಂಬ ಗಾದೆ ಮಾತಿದೆ. ಜೀವನದಲ್ಲಿ ಆರ್ಥಿಕವಾಗಿ ಹಿಂದುಳಿದು ಹಸಿವಿನಿಂದ ಬಳಲುತ್ತಿರುವವರಿಗೆ ಆಹಾರ ನೀಡಿ ಮಾನವೀಯತೆ ಮೆರೆಯಬೇಕಾದುದು ಮನುಷ್ಯ ಧರ್ಮ ಎಂದರು.
ರಮಝಾನ್ ಹಬ್ಬದ ಅಂಗವಾಗಿ ಪ್ರತಿವರ್ಷ ಬಡವರನ್ನು ಗುರುತಿಸಿ ಆಹಾರ ಸಾಮಗ್ರಿ ನೀಡುವ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಾಗಿದೆ. ಬಡವರಿಗೆ ದಾನ ನೀಡುವುದರಿಂದ ಶ್ರೀಮಂತರಿಗೆ ನೆಮ್ಮದಿ ದೊರೆಯಲು ಸಾಧ್ಯ. ಹಸಿದು ಯಾರೂ ಕೂಡ ಮಲಗುವಂತಾಗಬಾರದು ಎಂದು ಹೇಳಿದರು. ಶಾಂತಿನಗರ ಶಾಖೆಯ ವತಿಯಿಂದ ನಗರದಲ್ಲಿ ವಾಸವಿರುವ ಬಡ ಕುಟುಂಬಗಳ ಮನೆಗಳಿಗೆ ತೆರಳಿ ಆಹಾರ ಧಾನ್ಯದ ಕಿಟ್ ನೀಡಲಾಯಿತು.
ಈ ಸಮಯದಲ್ಲಿ ಗುರುಗಳಾದ ರಿಯಾಝ್ ಫಾಳಿಲಿ, ಎಸ್‌ವೈಎಸ್ ಜಿಲ್ಲಾ ಸಹ ಕಾರ್ಯದರ್ಶಿ ಕೆ.ಎಮ್.ಇಬ್ರಾಹೀಂ, ಬಿ.ಎಚ್.ಇಬ್ರಾಹೀಂ, ಇಸ್ಮಾಯೀಲ್, ಸಾದಿಕ್ ಮತ್ತಿತರರು ಉಪಸ್ಥಿತರಿದ್ದರು.