×
Ad

ಕಲಾವಿದರ ಬದುಕಿನ ಭದ್ರತೆಗೆ ಕ್ರಿಯಾ ಯೋಜನೆ ರೂಪಿಸಿ: ಬರಗೂರು

Update: 2016-06-19 23:36 IST

ಬೆಂಗಳೂರು, ಜೂ.19: ರಾಜ್ಯ ಸರಕಾರ ರಂಗಭೂಮಿ ಕಲಾವಿದರ ಬದುಕಿನ ಭದ್ರತೆಗಾಗಿ ಕ್ರಿಯಾ ಯೋಜನೆಯೊಂದನ್ನು ರೂಪಿಸಬೇಕು ಎಂದು ಹಿರಿಯ ಸಾಹಿತಿ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.
ನಗರದಲ್ಲಿ ಇಂದು ಕನ್ನಡ ಜನಶಕ್ತಿ ಕೇಂದ್ರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ರಂಗ ಕಲಾವಿದೆ ಡಾ.ಸುಭದ್ರಮ್ಮ ಮನ್ಸೂರ್ ಅವರಿಗೆ ‘ಶಾಂತವೇರಿ ಗೋಪಾಲ ಗೌಡ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಸರಕಾರದಲ್ಲಿ ಅನೇಕ ಯೋಜನೆಗಳಿವೆ. ಕಲಾವಿದರನ್ನು ಸಮೀಕ್ಷೆ ನಡೆಸಿ ಕಷ್ಟದಲ್ಲಿರುವ ಕಲಾವಿದರಿಗೆ ಸೌಲಭ್ಯಗಳನ್ನು ಒದಗಿಸಿಕೊಡುವುದು ಸಮಾಜದ ಕರ್ತವ್ಯ. ಕಲಾವಿದರು ಹೊಟ್ಟೆಪಾಡಿಗಾಗಿ ರಂಗಭೂಮಿಗೆ ಬಂದಿದ್ದರೂ, ಅವರ ಖಾಸಗಿ ಬದುಕು ದುಸ್ತರವಾಗಿರುತ್ತದೆ. ಸುಭಿಕ್ಷ ಸಮಾಜ ಎಂದು ಕರೆಸಿಕೊಳ್ಳಬೇಕಾದರೆ, ಕಲಾವಿದರೂ ಕೂಡ ಸುಭಿಕ್ಷರಾಗಿರಬೇಕು. ಆದ್ದರಿಂದ ಸರಕಾರ ಕಲಾವಿದರ ಪರವಾದ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಬರಗೂರು ರಾಮಚಂದ್ರಪ್ಪ ಆಶಿಸಿದರು.
ಗ್ರಾಮೀಣ ರಂಗಭೂಮಿಯೇ ವೃತ್ತಿ ರಂಗಭೂಮಿಯ ವಿಕಾಸದ ಹಂತ. ವೃತ್ತಿ ರಂಗಭೂಮಿಯ ಬೆಳವಣಿಗೆ ಬುಡಕಟ್ಟು ಜನಾಂಗದ ಸಂಸ್ಕೃತಿಯಿಂದ ಆಗಿದೆ. ಕಲಾಸೇವೆ ಮಾಡುವ ಕಲಾವಿದರಿಗೆ ಭಿಕ್ಷೆಯ ರೂಪದಲ್ಲಿ ಧನಸಹಾಯ ಮಾಡದೆ, ಅವರ ಕಲೆಯನ್ನು ಗೌರವಿಸಿ ಅವರಿಗೆ ಜೀವನ ಭದ್ರತೆ ಒದಗಿಸಬೇಕು ಎಂದು ಅವರು ಹೇಳಿದರು.

ಸರಕಾರ ಇಲ್ಲವೆ ಸಮಾಜ ಕಲಾವಿದರಿಗೆ ಒತ್ತಾಸೆಯಾಗಿರಬೇಕು. ಕಲಾವಿದರು ಈ ನಾಡಿನಲ್ಲಿ ಹುಟ್ಟಿರುವುದಕ್ಕೆ ಹೆಮ್ಮೆಪಡುವಂತಿರಬೇಕು. ಹೆಚ್ಚಿನ ಕಲಾವಿದರು ರಂಗದ ಮೇಲೆ ರಂಜನೆ ಮಾಡುತ್ತಿದ್ದರೂ, ಅವರ ನಿಜ ಬದುಕು ವೈರುಧ್ಯಗಳಿಂದ ಕೂಡಿರುತ್ತದೆ. ಇಂತಹ ಕಲಾವಿದರಿಗೆ ಮಾಸಾಶನ, ಸಹಾಯಧನ, ನಿವೇಶನ ದೊರೆತರೆ, ಅವರ ಬದುಕು ಕೂಡ ಸುಂದರವಾಗಬಹುದು ಎಂದು ಅವರು ಆಶಿಸಿದರು.
ಸುಭದ್ರಮ್ಮ ಮನ್ಸೂರ್ ಅತೀ ಬಡತನದಲ್ಲಿ ಹುಟ್ಟಿ ರಂಗಭೂಮಿಯಲ್ಲಿ ಸಾಧನೆ ಮಾಡಿದವರು. ಅವರು ಅಭಿನೇತ್ರಿಯೂ ಹೌದು, ಗಾಯಕಿಯೂ ಹೌದು. ಅಸಂಖ್ಯಾತ ಅಭಿನೇತ್ರಿಗಳ ಪ್ರತೀಕವಾಗಿ, ಅನಾಮಧೇಯ ಪ್ರತಿಭೆಗಳ ಪ್ರತೀಕವಾಗಿ ಇಂದು ಅವರನ್ನು ಗುರುತಿಸಿ ಗೌರವಿಸಲಾಗುತ್ತಿದೆ ಎಂದು ಬರಗೂರು ರಾಮಚಂದ್ರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ಜನಶಕ್ತಿ ಸಂಸ್ಥೆಯ ಅಧ್ಯಕ್ಷ ಸಿ.ಕೆ.ರಾಮೇಗೌಡ ಮಾತನಾಡಿ, ಶಾಂತವೇರಿ ಗೋಪಾಲಗೌಡ ಅವರ ಹಾದಿಯಲ್ಲಿ ಮುನ್ನಡೆಯುತ್ತಿರುವವರನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ರಂಗತಜ್ಞ ಹಾಗೂ ಪತ್ರಕರ್ತ ಗುಡಿಹಳ್ಳಿ ನಾಗರಾಜು, ಶಿವಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News