×
Ad

ಇಂದಿನಿಂದ ಎಸೆಸೆಲ್ಸಿ ಪೂರಕ ಪರೀಕ್ಷೆ

Update: 2016-06-19 23:38 IST

ಶಿವಮೊಗ್ಗ, ಜೂ.19: ಜೂ.20ರಿಂದ 27ರವರೆಗೆ ಶಿವಮೊಗ್ಗ ಜಿಲ್ಲಾದ್ಯಂತ ಒಟ್ಟು 16 ಕೇಂದ್ರಗಳಲ್ಲಿ ಎಸೆಸೆಲ್ಸಿ ಪೂರಕ ಪರೀಕ್ಷೆಗಳು ನಡೆಯಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾರಾಯಣಗೌಡ ತಿಳಿಸಿದ್ದಾರೆ.

 ಜಿಲ್ಲೆಯಲ್ಲಿ ಒಟ್ಟು 5,170 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಪರೀಕ್ಷೆ ಸುಗಮವಾಗಿ ನಡೆಸುವ ಉದ್ದೇಶದಿಂದ ಜಿಲ್ಲಾ ಹಾಗೂ ತಾಲೂಕು ಹಂತದಲ್ಲಿ ಜಾಗೃತದಳ, ವಿಶೇಷ ವೀಕ್ಷಕರ ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನಿಷೇಧಾಜ್ಞೆ: ಎಸೆಸೆಲ್ಸಿ ಪೂರಕ ಪರೀಕ್ಷೆ ಶಾಂತಿಯುತವಾಗಿ ಮತ್ತು ಪಾರದರ್ಶಕವಾಗಿ ನಡೆಸುವ ಸಲುವಾಗಿ ಹಾಗೂ ಪರೀಕ್ಷೆ ನಡೆಯುವ ಅವಧಿಯಲ್ಲಿ ಯಾವುದೇ ರೀತಿಯ ಅವ್ಯವಹಾರ, ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲು ಹಾಗೂ ಪರೀಕ್ಷಾ ಕೇಂದ್ರದ ಸುತ್ತಲೂ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀ. ಪ್ರದೇಶದ ವ್ಯಾಪ್ತಿಯೊಳಗೆ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಅವರು ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಗೆ ಸಂಬಂಧಪಟ್ಟ ಸಿಬ್ಬಂದಿ, ಅಧಿಕಾರಿಗಳನ್ನು ಹೊರತುಪಡಿಸಿ ಇತರ ವ್ಯಕ್ತಿಗಳು ಪರೀಕ್ಷಾ ಕೇಂದ್ರದ ಆವರಣ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಳತೆಯಲ್ಲಿ ಐದು ಹಾಗೂ ಐದಕ್ಕಿಂತ ಹೆಚ್ಚಿನ ಜನರು ಗುಂಪುಗೂಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕೇಂದ್ರದ ಸುತ್ತಲಿನ ಟೈಪಿಂಗ್, ಝೆರಾಕ್ಸ್, ಹಾಗೂ ಫ್ಯಾಕ್ಸ್ ಅಂಗಡಿಗಳು ಪರೀಕ್ಷೆ ಅವಧಿಯಲ್ಲಿ ತೆರೆಯುವುದನ್ನು ಹಾಗೂ ಮೊಬೈಲ್ ಬಳಕೆ ಮಾಡುವುದನ್ನು ಪ್ರತಿಬಂಧಿಸಲಾಗಿದೆ ಎಂದವರು ಆದೇಶದಲ್ಲಿ ತಿಳಿಸಿದ್ದಾರೆ.

ವಾಣಿಜ್ಯ ಪರೀಕ್ಷೆ ಕೇಂದ್ರಗಳ ಸುತ್ತ ಜೂ. 24 ರವರೆಗೆ ನಿಷೇಧಾಜ್ಞೆ

ಶಿವಮೊಗ್ಗ: ವಾಣಿಜ್ಯ ಪರೀಕ್ಷೆ ನಡೆಯುವ ಕಾಲೇಜುಗಳ ಸುತ್ತ 200 ಮೀ. ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿ ಕಾರಿ ವಿ.ಪಿ.ಇಕ್ಕೇರಿ ಆದೇಶಿಸಿದ್ದಾರೆ.

 ಜೂನ್13ರಿಂದ 24ರವರೆಗೆ ಜಿಲ್ಲೆಯ ವಿವಿಧ ನಾಲ್ಕು ಕಾಲೇಜುಗಳಲ್ಲಿ ವಾಣಿಜ್ಯ ಪರೀಕ್ಷೆ ನಡೆಯುತ್ತಿದ್ದು, ಈ ಪರೀಕ್ಷಾ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ವ್ಯಾಪ್ತಿಯಲ್ಲಿ ಬೆಳಗ್ಗೆ 8ರಿಂದ ಸಂಜೆ 5 ಗಂಟೆವರೆಗೆ ಸಿಆರ್‌ಪಿಸಿ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಆದೇಶಿಸಲಾಗಿದೆ. ಶಿವಮೊಗ್ಗದ ಸರಕಾರಿ ಪದವಿ ಪೂರ್ವ ಕಾಲೇಜು, ಭದ್ರಾವತಿ ಸಂಚಿಹೊನ್ನಮ್ಮ ಬಾಲಿಕಾ ಪದವಿ ಕಾಲೇಜು, ಸಾಗರ ಸರಕಾರಿ ಪದವಿ ಪೂರ್ವ ಕಾಲೇಜು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಶಿವಮೊಗ್ಗ ಈ ಪರೀಕ್ಷಾ ಕೇಂದ್ರಗಳ ಸುತ್ತ ಯಾವುದೇ ಶಾಂತಿ ಭಂಗ ಬಾರದಂತೆ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News