ದುಬೈಯಲ್ಲಿ ರಮಝಾನ್ ಅನುಭವ
ಇಸ್ಲಾಮಿನ ಪಂಚ ಆಧಾರಸ್ತಂಭಗಳಲ್ಲೊಂದಾದ ರಮಝಾನ್ ತಿಂಗಳ ಉಪವಾಸ ವ್ರತ ಮತ್ತೆ ಆರಂಭವಾಗಿದೆ. ಮುಸ್ಲಿಮರಿಗಿದು ಪವಿತ್ರ ತಿಂಗಳು. ಮನದ ಕೊಳೆಯನ್ನು ನೀಗಿಸಿ, ದಾನಧರ್ಮಗಳು, ದೇವಾರಾಧನೆಯಲ್ಲಿ ತಮ್ಮ ಅಮೂಲ್ಯ ಸಮಯವನ್ನು ಹೆಚ್ಚು ಹೆಚ್ಚು ವ್ಯಯಿಸುವ ತಿಂಗಳು. ಇತ್ತೀಚಿನ ಸುಮಾರು ಆರೇಳು ವರ್ಷಗಳಿಂದ ನನ್ನ ರಮಝಾನ್ ದುಬೈಯಲ್ಲಿಯೇ ಕಳೆಯುತ್ತಿದೆ. ಮುಸ್ಲಿಮ್ ರಾಷ್ಟ್ರವಾದ ಇಲ್ಲಿ ಈ ತಿಂಗಳಿಗೆ ಪ್ರತ್ಯೇಕವಾದ ವೈಶಿಷ್ಟವಿದೆ. ಈ ತಿಂಗಳನ್ನು ಜಾತಿಧರ್ಮಗಳನ್ನು ಮೀರಿ ಪ್ರತಿಯೊಬ್ಬರೂ ಗೌರವಿಸುತ್ತಾರೆ. ಸ್ವಾಗತಿಸುತ್ತಾರೆ. ಉಪವಾಸದ ಅವಧಿಯಲ್ಲಿ ನೀರು ಕುಡಿಯುವುದಕ್ಕಾಗಲಿ, ಆಹಾರ ಸೇವಿಸುವುದಕ್ಕಾಗಲೀ ಅವಕಾಶವಿಲ್ಲ. ಇದನ್ನು ಪ್ರತಿಯೊಬ್ಬರೂ ಪಾಲಿಸುತ್ತಾರೆ. ಕೆಲಸದ ಸಮಯದಲ್ಲೂ ಎಲ್ಲರಿಗೂ ಪ್ರತೀ ದಿನ ಎರಡು ಗಂಟೆಗಳಷ್ಟು ರಿಯಾಯಿತಿ ಇದೆ. ಸಮಯದಲ್ಲಿ ರಿಯಾಯಿತಿ ನೀಡಲಾಗದಿದ್ದರೆ ಗಂಟೆಗಿಷ್ಟೆಂದು ಹೆಚ್ಚುವರಿ ಸಂಬಳ ನೀಡಲಾಗುತ್ತದೆ.
ಸಂಜೆಯ ಹೊತ್ತು ಅಂದರೆ ಉಪವಾಸ ವ್ರತವನ್ನು ತೊರೆಯುವ ಸಮಯ ಮಸೀದಿಯ ಹೊರಗಡೆ ಅಥವಾ ಉಪವಾಸ ತೊರೆಯಲೆಂದೇ ನಿರ್ಮಿಸುವ ಟೆಂಟ್ಗಳ ಬಳಿ ದೇಶ ಭಾಷೆಗಳ ಹಂಗಿಲ್ಲದೇ, ಬಡವ ಸಿರಿವಂತನೆಂಬ ಭೇದವಿಲ್ಲದೇ, ಕಪ್ಪು, ಬಿಳುಪೆಂಬ ಭಾವವಿಲ್ಲದೇ ಒಂದಾಗಿ ಕೂತು ಉಪವಾಸ ತೊರೆಯುವ ದೃಶ್ಯ ಅಪೂರ್ವ. ಅದು ಮಾತ್ರವಲ್ಲ, ಹೆಚ್ಚಿನ ಅರಬಿಗಳ ಮನೆಯಲ್ಲಿ ಉಪವಾಸಿಗರಿಗೆ ನೀಡಲೆಂದೇ ಮಣಗಟ್ಟಲೇ ಆಹಾರ ಬೇಯಿಸಲಾಗುತ್ತದೆ. ಜನರು ಸಾಲಾಗಿ ನಿಂತು ಅದನ್ನು ಸ್ವೀಕರಿಸುತ್ತಾರೆ. ಕೆಲಸ ಮುಗಿಸಿ ಮನೆ ಸೇರಿ ಆಹಾರ ತಯಾರಿಸಬೇಕೆಂಬ ಚಿಂತೆಯಿರುವ ಬ್ಯಾಚುಲರ್ಗಳಿಗೆ ಇಂದೊಂಥರಾ ವರದಾನ.
ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೃತ್ತಿಯಲ್ಲಿರುವ ನನಗೆ ಎರಡು ದಿನಗಳು ಕೆಲಸವಿದ್ದರೆ ಎರಡು ದಿನ ರಜೆ. ದಿನವೂ ಸಾವಿರಾರು ಜನರು ಪ್ರಯಾಣಿಸುವ ಇಲ್ಲಿ ಸಮಯದಲ್ಲಿ ರಿಯಾಯಿತಿ ಸಿಗುವುದು ಕಷ್ಟ. ಹಾಗಾಗಿ ಹೆಚ್ಚುವರಿ ವೇತನ ದೊರೆಯುತ್ತದೆ. ಅದಲ್ಲದೇ ಉಪವಾಸದ ತಿಂಗಳಲ್ಲಿ ಉತ್ತಮ ಆಹಾರವನ್ನೂ ನಮ್ಮ ಕಂಪೆನಿ ಒದಗಿಸುತ್ತದೆ. ಆದರೂ ಕೆಲವೊಮ್ಮೆ ನಾವೆಲ್ಲ ಮನೆಯಿಂದ ತಂದ ಆಹಾರವನ್ನು ಒಟ್ಟಾಗಿ ಕುಳಿತು ಹಂಚಿ ತಿನ್ನುತ್ತೇವೆ. ಅದರಲ್ಲೊಂದು ವಿಶೇಷ ಖುಷಿಯೂ ಸಿಗುವುದು ಅಲ್ಲದೇ ವಿವಿಧ ದೇಶೀಯರ ವಿವಿಧ ಭಕ್ಷಗಳನ್ನು ಸವಿಯುವ ಅವಕಾಶವೂ ಸಿಗುವುದು. ಈ ತಿಂಗಳಲ್ಲಿ ಸಂಬಳವೂ ಬೇಗನೆ ನೀಡಬೇಕೆಂಬ ನಿಯಮವೂ ಇಲ್ಲಿದೆ. ಕಟ್ಟಡದ ಕಾರ್ಮಿಕರಿಗೆ ಮಟಮಟ ಮಧ್ಯಾಹ್ನದ ಕೆಲಸದಲ್ಲಿ ರಿಯಾಯಿತಿಯಿದೆ.
ಹಲವು ಕಡೆ ರಮಝಾನ್ ತಿಂಗಳಲ್ಲಿ ವಿಧವಿಧದ ಆಹಾರಗಳನ್ನು ತಯಾರಿಸಿ ಕೊನೆಗೆ ತಿನ್ನಲಾರದೇ ಎಸೆಯುವ ಕ್ರಮವನ್ನು ಕಂಡು ನೊಂದಿದ್ದೆ. ಹಸಿವಿನಿಂದ ಕಂಗಾಲಾಗಿರುವ ಹಲವರು ನಮ್ಮ ಸಮಾಜದಲ್ಲಿರುವಾಗ ನಾವು ಆಹಾರವನ್ನು ಹಾಳುಗೆಡಹುತ್ತಿದ್ದೇವಲ್ಲಾ ಎಂದು ಬೇಜಾರಾಗಿತ್ತು. ಈ ವರ್ಷ ಮಂಗಳೂರಿನಲ್ಲಿ ಕೆಲಯುವಕರು ಇಫ್ತಾರಿನ ನಂತರ ಉಳಿಯುವ ಹೆಚ್ಚುವರಿ ಆಹಾರವನ್ನು ಮನೆಮನೆಯಿಂದ ಸಂಗ್ರಹಿಸಿ ಹಸಿದವರ ಹೊಟ್ಟೆ ತುಂಬಿಸಿ ರಮಝಾನ್ ತಿಂಗಳನ್ನೊಂದು ಮಾದರಿಯನ್ನಾಗಿಸಿದ್ದಾರೆ. ಅವರಿಗೆ ಹೃದಯಾಂತರಾಳದ ಧನ್ಯವಾದಗಳು. ಅಲ್ಲಾಹನು ಅವರ ಕಾರ್ಯದಲ್ಲಿ ಶ್ರೇಯಸ್ಸನ್ನು ನೀಡಲಿ.
ಈ ರಮಝಾನ್ ತಿಂಗಳು ನಮ್ಮೆಲ್ಲರ ಪರಿವರ್ತನೆಯ ತಿಂಗಳಾಗಲಿ ಎಂಬ ಆಶಯದೊಂದಿಗೆ ಸರ್ವರಿಗೂ ರಮಝಾನ್ ತಿಂಗಳ ಶುಭಾಶಯಗಳು.
ಅಸ್ಮಾ ಮುನೀರ್ ದುಬೈ