ನಿಲ್ಲದ ಸಚಿವ ಸ್ಥಾನ ಆಕಾಂಕ್ಷಿಗಳ ಬೆಂಬಲಿಗರ ಕೋಪ-ತಾಪ
ಬೆಂಗಳೂರು, ಜೂ. 20: ರಾಜ್ಯ ಸಚಿವ ಸಂಪುಟ ಪುನಾರಚನೆ ಬೆನ್ನಲ್ಲೇ ಸಚಿವ ಸ್ಥಾನ ಕೈತಪ್ಪಿದ ಹಿರಿಯರು ಹಾಗೂ ಆಕಾಂಕ್ಷಿ ಶಾಸಕರಲ್ಲಿ ಅತೃಪ್ತಿ, ಅಸಮಾಧಾನ ಭುಗಿಲೆದ್ದಿದೆ. ಈ ನಡುವೆಯೆ ಅಂಬರೀಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವುದು ಸಿಎಂ ಸಿದ್ಧರಾಮಯ್ಯರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ವಂಚಿತರಾಗಿದ್ದ ವಿಜಯನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ಗೋವಿಂದರಾಜನಗರ ಕ್ಷೇತ್ರದ ಪ್ರಿಯಾಕೃಷ್ಣ ಸೇರಿದಂತೆ 12ಕ್ಕೂ ಹೆಚ್ಚು ಮಂದಿ ಸಾಮೂಹಿಕ ರಾಜೀನಾಮೆ ನೀಡುತ್ತಾರೆಂಬ ಸುದ್ದಿ ಹಿನ್ನೆಲೆಯಲ್ಲಿ ಪಕ್ಷದಲ್ಲಿ ‘ಭಿನ್ನಮತ’ ಬಹಿರಂಗಗೊಂಡಿದೆ.
‘ಅಸಮರ್ಥ’ ಸಿಎಂ: ಸಚಿವ ಸ್ಥಾನ ಕಳೆದುಕೊಂಡಿರುವ ಹಿರಿಯ ಮುಖಂಡ ವಿ. ಶ್ರೀನಿವಾಸ ಪ್ರಸಾದ್, ‘ತಮ್ಮ ಅಸಮರ್ಥತೆ ಮರೆಮಾಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ಪುನಾರಚನೆ ಮಾಡಿದ್ದಾರೆ. ಮೊದಲ ಅಸಮರ್ಥ ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯ’ ಎಂದು ಸಂದರ್ಶನವೊಂದರಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಕಲಬುರ್ಗಿಯಲ್ಲಿಯೂ ಸಚಿವ ಸ್ಥಾನ ಕೈತಪ್ಪಿದ ಖಮರುಲ್ ಇಸ್ಲಾಮ್ ಬೆಂಬಲಿಗರು ಪ್ರತಿಭಟನೆ, ರಸ್ತೆತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದು, ಸಚಿವ ಸ್ಥಾನ ನೀಡದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ. ಕಾರಣವೇ ಇಲ್ಲದೆ, ಖಮರುಲ್ ಇಸ್ಲಾಮ್ ಅವರನ್ನು ಕೈಬಿಡಲಾಗಿದೆ ಎಂದು ಬೆಂಬಲಿಗರು ದೂರಿದ್ದಾರೆ.
ಸಚಿವ ಸ್ಥಾನಾಕಾಂಕ್ಷಿ ಶಾಸಕರಾದ ಡಾ.ಎ.ಬಿ.ಮಾಲಕರೆಡ್ಡಿ, ಎಂ.ಕೃಷ್ಣಪ್ಪ, ಮಾಲೀಕಯ್ಯ ಗುತ್ತೇದಾರ್, ಸಿ.ಪಿ.ಯೋಗೇಶ್ವರ್, ಎನ್.ಎಚ್.ಶಿವಶಂಕರರೆಡ್ಡಿ, ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವರು ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧವೆ ಬಂಡಾಯ ಹೂಡಲು ಸಿದ್ಧತೆ ನಡೆಸಿದ್ದಾರೆಂದು ಹೇಳಲಾಗಿದೆ.
ಜೆಡಿಎಸ್ ಗಾಳ: ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಅಸಮಾಧಾನಗೊಂಡಿರುವ ಶ್ರೀನಿವಾಸ ಪ್ರಸಾದ್, ಅಂಬರೀಶ್ ಸೇರಿ ಅತೃಪ್ತರನ್ನು ಸೆಳೆದುಕೊಳ್ಳಲು ಜೆಡಿಎಸ್ ಮುಂದಾಗಿದೆ. ಆ ನಿಟ್ಟಿನಲ್ಲಿ ಶ್ರೀನಿವಾಸಪ್ರಸಾದ್ ಹಾಗೂ ಅಂಬರೀಶ್ ಅವರನ್ನು ಸಂಪರ್ಕಿಸಿ ಜೆಡಿಎಸ್‌ಗೆ ಆಹ್ವಾನಿಸಿದ್ದಾರೆ.
ಈ ಮಧ್ಯೆಯೇ ಸಚಿವ ಸ್ಥಾನ ಕಳೆದುಕೊಂಡಿರುವ ಅಂಬರೀಶ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ‘ನೀವಿನ್ನೂ ಎತ್ತರಕ್ಕೆ ಬೆಳೆಯಬೇಕಿರುವ ವ್ಯಕ್ತಿ, ಯಾವುದೇ ಕಾರಣಕ್ಕೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತಹ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ’ ಎಂದು ಸಲಹೆ ನೀಡಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಸಚಿವ ಸ್ಥಾನ ಕಳೆದುಕೊಂಡವರ ಬೆಂಬಲಿಗರು ಹಾಗೂ ಸ್ಥಾನಾಕಾಂಕ್ಷಿ ಶಾಸಕರ ಅಭಿಮಾನಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿನೇಶ್ ಗುಂಡೂರಾವ್ ಅವರನ್ನು ಕೈಬಿಟ್ಟ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಮುಖ್ಯಮಂತ್ರಿ ಗೃಹ ಕಚೇರಿಗೆ ಮುತ್ತಿಗೆ ಹಾಕಿ ಕಿಡಿಕಾರಿದ್ದಾರೆ.
ಮನವೊಲಿಕೆ ಯತ್ನ: ಸಂಪುಟದಿಂದ ತಮ್ಮನ್ನು ಕೈಬಿಟ್ಟಿದ್ದಕ್ಕೆ ಆಕ್ರೋಶಗೊಂಡು ಶಾಸಕ ಸ್ಥಾನಕ್ಕೂ ರಾಜೀನಾಮೆಗೆ ಮುಂದಾಗಿರುವ ಮಾಜಿ ಸಚಿವ ಅಂಬರೀಶ್ ಅವರೊಂದಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ದೂರವಾಣಿ ಮೂಲಕ ಮಾತನಾಡಿದ್ದು, ‘ದುಡುಕಿ ಯಾವುದೇ ತೀರ್ಮಾನ ಕೈಗೊಳ್ಳಬೇಡಿ’ ಎಂದು ಮನವೊಲಿಸಿದ್ದಾರೆ ಎಂದು ತಿಳಿದು ಬಂದಿದೆ.