ಮುಂದುವರಿದ ಅಂಬರೀಷ್ ಅಭಿಮಾನಿಗಳ ಪ್ರತಿಭಟನೆ
ಇಬ್ಬರ ಆತ್ಮಹತ್ಯೆಗೆ ಯತ್ನ
ಮಂಡ್ಯ, ಜೂ.20: ಅಂಬರೀಷ್ ಅವರನ್ನು ಸಚಿವ ಸಂಪುಟ ದಿಂದ ಕೈಬಿಟ್ಟಿರುವುದನ್ನು ಖಂಡಿಸಿ ಮಂಡ್ಯದಲ್ಲಿ ಅಭಿಮಾನಿಗಳ ಪ್ರತಿಭಟನೆ ಮುಂದುವರಿದಿದ್ದು, ಸೋಮವಾರ ಪ್ರತಿಭಟನೆ ವೇಳೆ ಆತ್ಮಹತ್ಯೆಗೆ ಯತ್ನಿಸಿದ ಇಬ್ಬರಲ್ಲಿ ಓರ್ವ ತೀವ್ರ ಅಸ್ವಸ್ಥ ಗೊಂಡಿದ್ದಾನೆ.
ನಗರದ ಬೆಂಗಳೂರು-ಮೈಸೂರು ಹೆದ್ದಾರಿಯ ಸಂಜಯ್ ವೃತ್ತದಲ್ಲಿ ಕಾಂಗ್ರೆಸ್‌ನ ಮಹಿಳಾ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬೇವಿನಹಳ್ಳಿ ಕನಕಮ್ಮ ಎಂಬವರು ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಅಂಬರೀಷ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಕಾರರು, ಅಂಬರೀಷ್ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬೇಕು. ಅಂಬರೀಷ್ ಅವರು ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಹಿಳಾ ಕಾಂಗ್ರೆಸ್‌ನ ಜಿಲ್ಲಾ ಘಟಕದ ಕಾರ್ಯದರ್ಶಿ ಪಲ್ಲವಿ, ತಾಪಂ ಮಾಜಿ ಅಧ್ಯಕ್ಷೆ ವಿಜಯ ರಾಧಾಕೃಷ್ಣ, ನಗರಸಭೆ ಮಾಜಿ ಅಧ್ಯಕ್ಷೆ ನಾಗಮಣಿ, ಸುನಿತಾ, ರಾಧ, ಮಮತಾ ಮತ್ತಿತರರು ಪಾಲ್ಗೊಂಡಿದ್ದರು.
ಮದ್ದೂರು ವರದಿ: ತಾಲೂಕಿನ ಭಾರತಿನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅಂಬರೀಷ್ ಅಭಿಮಾನಿ ಕರಡಕೆರೆ ಗ್ರಾಮದ ಪುಟ್ಟಸ್ವಾಮಿ(32) ವಿಷ ಸೇವಿಸಿ ಕುಸಿದುಬಿದ್ದರು. ತಕ್ಷಣ ಅವರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಲಾಯಿತು.
ಪ್ರತಿಭಟನೆ ಮುಂದುವರಿಸಿದ ಅಂಬರೀಷ್ ಬೆಂಬಲಿಗರು, ಯಾವುದೇ ಕಪ್ಪುಚುಕ್ಕಿ ಇಲ್ಲದಂತೆ ವಸತಿ ಇಲಾಖೆಯನ್ನು ಮುನ್ನಡೆಸಿದ ಅಂಬರೀಷ್ ಅವರನ್ನು ಏಕಾಏಕಿ ಸಚಿವ ಸ್ಥಾನದಿಂದ ಕಿತ್ತುಹಾಕು ಮೂಲಕ ಸಿಎಂ ಸಿದ್ದರಾಮಯ್ಯ ಒಕ್ಕಲಿಗರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಮತ್ತು ಪಕ್ಷದ ವರಿಷ್ಠರ ನಡೆಯಿಂದ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಂಬರೀಷ್ ಅಭಿಮಾನಗಳು ಆಕ್ರೋಶಗೊಂಡಿದರು. ಮುಖ್ಯಮಂತ್ರಿಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಪ್ರತಿಭಟನಕಾರರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮ ಶೇಖರ್, ಮುಖಂಡರಾದ ತೊರೆಚಾಕನಹಳ್ಳಿ ಶಂಕರೇಗೌಡ, ಛತ್ರದಹೊಸಹಳ್ಳಿ ಸಿದ್ದರಾಜು, ಗುರುದೇವರಹಳ್ಳಿ ಸಿದ್ದರಾಜು, ಬಿದರಹಳ್ಳಿ ಚಂದ್ರಶೇಖರ್, ಅಣ್ಣೂರು ಸಿದ್ದರಾಜು, ದೇವರಾಜು, ದೇಸಿಗೌಡ, ಅಜಯ್ ಪಾಲ್ಗೊಂಡಿದ್ದರು.
ಅಂಬರೀಷ್ ಅವರು ಸ್ವಗ್ರಾಮ ದೊಡ್ಡರಸಿನಕೆರೆ ಸಮೀಪ ಅಂಬರೀಷ್ ಅಭಿಮಾನಿಗಳು ರಸ್ತೆಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ಅಂಬರೀಷ್ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಗೊಳಿಸಬೇಕೆಂದು ಆಗ್ರಹಿಸಿದರು.