ಮಲ್ಯ ಆಸ್ಪತ್ರೆಗೆ ಕಾರಣ ಕೇಳಿ ನೋಟಿಸ್: ಯು.ಟಿ.ಖಾದರ್
ಬೆಂಗಳೂರು, ಜೂ. 20: ಎಡಗೈ ಬೆರಳಿನ ಗಾಯಕ್ಕೆ ಚಿಕಿತ್ಸೆಗೆ ತೆರಳಿದ್ದ ಐದು ವರ್ಷದ ಬಾಲಕ ಆಸ್ಪತ್ರೆ ವೈದ್ಯರ ನಿರ್ಲಕ್ಷದ ಹಿನ್ನೆಲೆಯಲ್ಲಿ ಕೋಮಾ ಸ್ಥಿತಿಗೆ ಹೋಗಿದ್ದು, ಈ ಸಂಬಂಧ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡಿದ ಅವರು, ಜೂ.10ರಂದು ಎಡಗೈ ಬೆರಳಿಗೆ ಗಾಯವಾಗಿದೆ ಎಂದು ಮಾಸ್ಟರ್ ಲಕ್ಷ ಎಂದು ಐದು ವರ್ಷದ ಬಾಲಕನನ್ನು ನಗರದ ಮಲ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದರೆ, ಆಸ್ಪತ್ರೆ ನಿರ್ಲಕ್ಷದಿಂದ ಬಾಲಕ ಕೋಮಾ ಸ್ಥಿತಿಗೆ ಹೋಗಿದ್ದು, ಆ ಬಳಿಕ ಆತನನ್ನು ಹೆಚ್ಚಿನ ಚಿಕಿತ್ಸೆಗೆ ಮಣಿ ಪಾಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಮಲ್ಯ ಆಸ್ಪತ್ರೆಗೆ ಸೂಚಿಸಲಾಗಿದೆ. ಆ ಹಿನ್ನೆಲೆಯಲ್ಲಿ ವರದಿ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬ್ಯೂಟಿ ಸೆಲೂನ್ ನಿಯಂತ್ರಣಕ್ಕೆ ಕಾಯ್ದೆ: ರಾಜ್ಯದ ಲ್ಲಿನ ಬ್ಯೂಟಿ ಸೆಲೂನ್‌ಗಳ ನಿಯಂತ್ರಣಕ್ಕೆ ನೂತನವಾಗಿ ಕಾಯ್ದೆಯೊಂದನ್ನು ರೂಪಿಸಲಾಗುವುದು ಎಂದ ಸಚಿವ ಖಾದರ್, ಕೆಪಿಎಂಎ ಕಾಯ್ದೆಯನ್ವಯ ಆರೋಗ್ಯ ಇಲಾಖೆ ಯಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯಗೊಳಿ ಸಲಾಗಿದೆ ಎಂದರು.
ಬ್ಯೂಟಿ ಸೆಲೂನ್‌ಗಳು ಸ್ಥಳೀಯ ಸಂಸ್ಥೆಗಳಿಂದ ಕೇವಲ ವಾಣಿಜ್ಯ ಪರವಾನಿಗೆ ಪಡೆದು ಬ್ಯೂಟಿ ಸಲೂನ್ ನಡೆಸಲಾಗುತ್ತಿತು ಎಂದ ಅವರು, ಬ್ಯೂಟಿ ಸೆಲೂನ್ ಹೆಸರಿನಲ್ಲಿ ಅಕ್ರಮ ಚಟುವಟಿಕೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಣೆ ನೀಡಿದರು.
ಸಾಂಕ್ರಾಮಿಕ ರೋಗಗಳ ತಡೆ: ಮುಂಗಾರು ಮಳೆ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಡೆಂಗ್, ಚಿಕುನ್‌ಗುನ್ಯಾ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ತಡೆಗೆ ಎಲ್ಲ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಸಾರ್ವಜನಿಕರು ಚಳಿ-ಜ್ವರ ಬಂದರೆ ನಿರ್ಲಕ್ಷ ವಹಿಸದೆ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ಷರತ್ತಿನೊಂದಿಗೆ ವಯೋಮಿತಿ ಏರಿಕೆ
ಕೇಂದ್ರದ ತೀರ್ಮಾನದಂತೆ ರಾಜ್ಯದಲ್ಲಿಯೂ ಸರಕಾರಿ ವೈದ್ಯರ ನಿವೃತ್ತಿ ವಯೋಮಿತಿಯನ್ನು 60ರಿಂದ 65ಕ್ಕೆ ಏರಿಕೆಗೆ ಎರಡು ಷರತ್ತು ವಿಧಿಸಿದ್ದು, ವೈದ್ಯರು ಇಚ್ಛಿಸಿದರೆ ಮಾತ್ರ ಸೇವೆಯಲ್ಲಿ ಮುಂದುವರಿಯಬಹುದು. ಜತೆಗೆ ದೈಹಿಕವಾಗಿ ಸದೃಢರಾಗಿರಬೇಕು’
- ಯು.ಟಿ.ಖಾದರ್ ಆರೋಗ್ಯ ಸಚಿವ