×
Ad

ಎತ್ತಿನಹೊಳೆ ಯೋಜನೆಗೆ ವಿರೋಧ ಸಲ್ಲ: ಸ್ಪೀಕರ್

Update: 2016-06-20 23:11 IST

ಬೆಂಗಳೂರು, ಜೂ. 20: ಕೆಲವರು ತಮ್ಮ ವೈಯಕ್ತಿಕ ರಾಜಕೀಯ ಕಾರಣ ಗಳಿಗಾಗಿ ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬಯಲು ಸೀಮೆಯ ಜಿಲ್ಲೆಗಳಿಗೆ ನೀರು ಒದಗಿಸುವ ಎತ್ತಿನಹೊಳೆ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಹಂಗಾಮಿ ಸ್ಪೀಕರ್ ಎನ್.ಎಚ್.ಶಿವಶಂಕರ ರೆಡ್ಡಿ ಟೀಕಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸುಮಾರು 400 ಟಿಎಂಸಿ ಯಷ್ಟು ನೀರು ಕರಾವಳಿ ಭಾಗದಿಂದ ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತದೆ. ಆದುದರಿಂದ ಬಯಲು ಸೀಮೆಗೆ ನೀರು ಒದಗಿಸಲು ಕೇವಲ 24 ಟಿಎಂಸಿ ನೀರನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.
ಎತ್ತಿನಹೊಳೆ ಯೋಜನೆಯಿಂದ ಪರಿಸರದ ಮೇಲೆ ಯಾವುದೇ ದುಷ್ಪರಿಣಾಮ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಣೆ ನೀಡಿದ್ದಾರೆ ಎಂದ ಅವರು, ಎತ್ತಿನಹೊಳೆ ಯೋಜನೆ ಅನುಷ್ಠಾನ ಹಾಗೂ ಪರ್ಯಾಯ ನೀರಿನ ಮೂಲಗಳ ಅಧ್ಯಯನಕ್ಕೆ ಈಗಾಗಲೇ ಸರಕಾರ ತಜ್ಞರ ಸಮಿತಿ ರಚನೆ ಮಾಡಿದೆ ಎಂದರು.
ಹಿರಿತನ ಪರಿಗಣಿಸಬೇಕಿತ್ತು: ಸಂಪುಟ ಪುನಾರಚನೆಯಲ್ಲಿ ಹಿರಿತನಕ್ಕೆ ಪ್ರಾತಿನಿಧ್ಯ ದೊರೆತಿಲ್ಲ. ಅಲ್ಲದೆ, ಚಿಕ್ಕಬಳ್ಳಾಪುರ, ಮಂಡ್ಯ ಸೇರಿದಂತೆ ಆರೇಳು ಜಿಲ್ಲೆ ಗಳಿಗೆ ಸ್ಥಾನ ನೀಡಿಲ್ಲ. ಹೀಗಾಗಿ ತಾನು ಸೇರಿದಂತೆ ನಾಲ್ಕೈದು ಬಾರಿ ಆಯ್ಕೆ ಯಾದ ಶಾಸಕರ ಅಸಮಾಧಾನ ಸಹಜ ಎಂದು ಅವರು ಹೇಳಿದರು.
ಹಿರಿಯ ಶಾಸಕರನ್ನು ಕಡೆಗಣಿಸಿ ಹೊಸಬರಿಗೆ ಮೊಟ್ಟಮೊದಲಬಾರಿಗೆ ಅವಕಾಶ ನೀಡಲಾಗಿದೆ. ಪ್ರಾತಿನಿಧ್ಯ ಕಡೆಗಣಿಸಿರುವ ಬಗ್ಗೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತರಲಾಗಿದೆ. ಬೆಂಬಲಿಗರು ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಲು ಆಗದು ಎಂದು ತಿಳಿಸಿದರು.
ಕಾಲಮಿತಿ: ವಿಧಾನಸಭೆ ಸದನ ಸಮಿತಿಗಳು ವರದಿ ನೀಡಲು ವಿಳಂಬ ನೀತಿ ಅನುಸರಿಸುವುದು ಸರಿಯಲ್ಲ. ಈ ಬಗ್ಗೆ ಶೀಘ್ರದಲ್ಲೆ ಸಮಿತಿ ಅಧ್ಯಕ್ಷರ ಸಭೆ ಕರೆದು ನಿಗದಿತ ಕಾಲಮಿತಿಯೊಳಗೆ ಸಮಿತಿ ವರದಿ ನೀಡಲು ಅಧ್ಯಕ್ಷರುಗಳಿಗೆ ಸೂಚನೆ ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟಣೆ ನೀಡಿದರು.
ವಿಧಾನ ಮಂಡಲ ಕಲಾಪದಲ್ಲಿ ಅರ್ಥಪೂರ್ಣ ಚರ್ಚೆ ಇತ್ತೀಚಿನ ದಿನಗಳಲ್ಲಿ ಕಾಣುತ್ತಿಲ್ಲ. ಆ ನಿಟ್ಟಿನಲ್ಲಿ ಎಲ್ಲ ಶಾಸಕರು ಅಧ್ಯಯನ ಶೀಲತೆ ರೂಢಿಸಿಕೊಳ್ಳಬೇಕು. ಕಲಾಪದಲ್ಲಿ ಅರ್ಥಪೂರ್ಣ ಚರ್ಚೆ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಆಡಳಿತ ಮತ್ತು ವಿಪಕ್ಷಗಳ ಶ್ರಮಿಸಬೇಕೆಂದು ಅವರು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News