ಎಜಿ ಮಧುಸೂದನ್ ನಾಯಕ್ ಬೇಷರತ್ ಕ್ಷಮೆಯಾಚನೆ
ಬೆಂಗಳೂರು, ಜೂ.20: ಪಿಯುಸಿ ಗಣಿತ ಪ್ರಶ್ನೆ ಪತ್ರಿಕೆಗೆ ಗ್ರೇಸ್ ಮಾರ್ಕ್ಸ್ ನೀಡಿರುವ ಹಿನ್ನೆಲೆಯಲ್ಲಿ ಅಡ್ವೋಕೇಟ್ ಜನರಲ್ ಮಧುಸೂಧನ್ ನಾಯಕ್ ಬೇಷರತ್ ಕ್ಷಮೆಯಾಚಿಸಿ, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಸರಕಾರದ ನಡುವಿನ ಸಮನ್ವಯದ ಕೊರತೆಯಿಂದಾಗಿ ಏಳು ಪ್ರಶ್ನೆಗಳಿಂದ 21 ಅಂಕ ನೀಡಿರೋದು ತಿಳಿಯಲಿಲ್ಲ ಎಂದು ಹೈಕೋರ್ಟ್ ನ್ಯಾಯಪೀಠಕ್ಕೆ ತಿಳಿಸಿದರು.
ಈ ಸಂಬಂಧ ಮಂಗಳೂರಿನ ಭುವನೇಶ್ವರಿ ಎಜುಕೇಶನ್ ಟ್ರಸ್ಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾಯಮೂರ್ತಿ ರವಿ ಮಳೀಮಠ ಅವರಿದ್ದ ನ್ಯಾಯಪೀಠಕ್ಕೆ ಈ ವಿಷಯ ತಿಳಿಸಿದರು. ಈ ಹಿಂದೆ ಗಣಿತ ಪ್ರಶ್ನೆ ಪತ್ರಿಕೆಯಲ್ಲಿ ಗ್ರೇಸ್ ಮಾರ್ಕ್ಸ್ ನೀಡಿಲ್ಲ ಎಂದು ಸರಕಾರದ ಪರ ವಕೀಲರು ನ್ಯಾಯಪೀಠಕ್ಕೆ ಹೇಳಿಕೆ ನೀಡಿದ್ದರು. ಆದರೆ, ಏಳು ಪ್ರಶ್ನೆಗಳಿಂದ 21 ಅಂಕ ನಿಡಿರೋದು ಉತ್ತರ ಪತ್ರಿಕೆ ವೌಲ್ಯ ಮಾಪನದಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಅಡ್ವೋಕೇಟ್ ಜನರಲ್ ಮಧುಸೂಧನ್ ನಾಯಕ್ ಅವರು ಖುದ್ದು ಹಾಜರಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಸರಕಾರದ ಸಮನ್ವಯ ಕೊರತೆಯಿಂದಾಗಿ ಗ್ರೇಸ್ ಮಾರ್ಕ್ಸ್ ನೀಡಿ ರುವ ಬಗ್ಗೆ ಸ್ಪಷ್ಟತೆ ಸಿಕ್ಕಿರಲಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಅಲ್ಲದೆ, ಎಜಿ ಅವರು ಮುಂದಿನ ಗುರುವಾರ ಈ ಬಗ್ಗೆ ವಿವರ ವಾಗಿ ಮಾಹಿತಿ ನೀಡುವುದಾಗಿ ನ್ಯಾಯಪೀಠಕ್ಕೆ ತಿಳಿಸಿದರು. ಅಲ್ಲದೆ, ಮಂಗಳೂರಿನ ಭುವನೇಶ್ವರಿ ಎಜುಕೇಶನ್ ಟಸ್ಟ್‌ನವರು ಗ್ರೆಸ್ ಮಾರ್ಕ್ಸ್ ನೀಡುವುದರಿಂದ ಸಿಬಿಎಸ್‌ಸಿ ಹಾಗೂ ರಾಜ್ಯ ವಿದ್ಯಾರ್ಥಿಗಳ ನಡುವೆ ಪೈಪೋಟಿಯಲ್ಲಿ ತಾರತಮ್ಯ ಆಗುತ್ತದೆ ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು.