×
Ad

ಹೊನ್ನಾವರ: ನಿರಂತರ ವಿದ್ಯುತ್ ಪೂರೆಕೆಗೆ ಆಗ್ರಹ

Update: 2016-06-20 23:15 IST

ಹೊನ್ನಾವರ, ಜೂ.20: ತಾಲೂಕಿನಲ್ಲಿ ನಿರಂತರ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಮಾಜಿ ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಸೋಮವಾರ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.

ಮಾಜಿ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಹೆಸ್ಕಾಂನವರು ಮನಸೋ ಇಚ್ಛೆ ವಿದ್ಯುತ್ ಕಡಿತ ಮಾಡುತ್ತಿದ್ದು ತಾಲೂಕಿನ ಜನರು ದಿನನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ವಿದ್ಯುತ್ ಸಮಸ್ಯೆ ಬಗೆಹರಿಸಲು ಗಡುವು ನಿಗದಿ ಮಾಡಿ ಅಥವಾ ಮೇಲಧಿಕಾರಿಗಳನ್ನು ಇಲ್ಲಿಗೆ ಕರೆಯಿಸಿ. ಸಮರ್ಪಕ ಉತ್ತರ ಸಿಗದೆ ಇದ್ದರೆ ಧರಣಿ ಕುಳಿತುಕೊಳ್ಳುವುದಾಗಿ ಹೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಸಿದರು.

ಪದೇ ಪದೇ ವಿದ್ಯುತ್ ಕಡಿತ ಮಾಡುವುದರಿಂದ ವಿದ್ಯಾರ್ಥಿಗಳು, ಕೃಷಿಕರು, ಅಂಗಡಿಕಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಟರ್‌ನೆಟ್ ಅಂಗಡಿಗಳಲ್ಲಿ ವಿದ್ಯಾರ್ಥಿಗಳು ವಿದ್ಯುತ್ ಇಲ್ಲದೇ ದಿನಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಗಿದೆ. ಜನರಿಗೆ ತೊಂದರೆ ಕೊಡಬೇಡಿ ಸರಿಯಾಗಿ ವಿದ್ಯುತ್ ಕೊಡಿ ಎಂದು ಆಗ್ರಹಿಸಿದರು.

 ಜೆಡಿಎಸ್ ಮಂಕಿ ಘಟಕದ ಅಧ್ಯಕ್ಷ ಜಿ.ಎನ್.ಗೌಡ ಮಾತನಾಡಿ, ಗ್ರಾಹಕರು ಕರೆ ಮಾಡಿದರೆ ಹೆಸ್ಕಾಂ ಕಚೇರಿಯಲ್ಲಿ ಸ್ವೀಕರಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

  ಹೊರಸಾಲದಲ್ಲಿ 4 ದಿನಗಳಿಂದ ವಿದ್ಯುತ್ ಇಲ್ಲ. ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಜಂಗಲ್ ಕಟ್ಟಿಂಗ್ ಸರಿಯಾಗಿ ಮಾಡುತ್ತಿಲ್ಲ. ಚಿಕ್ಕಚಿಕ್ಕ ಗಿಡಗಳನ್ನು ಮಾತ್ರ ಕತ್ತರಿಸುತ್ತಾರೆ. ವಿದ್ಯುತ್ ತಂತಿಯ ಮೇಲೆ ಬೀಳುವ ಮರಗಳನ್ನು ಕಟ್ಟಿಂಗ್ ಮಾಡುವುದಿಲ್ಲ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಮನವಿಯಲ್ಲಿ ಹೊನ್ನಾವರ ತಾಲೂಕಿನಲ್ಲಿ ಅತೀ ಹೆಚ್ಚು ವಿದ್ಯುತ್ ಬಳಕೆದಾರರಿದ್ದು ಗ್ರಾಹಕರಿಂದ ಕೋಟ್ಯಂತರ ರೂ. ಆದಾಯವಿದೆ. ಆದರೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುತ್ತಿಲ್ಲ. ಇದರಿಂದ ಕೈಗಾರಿಕೆ, ಕೃಷಿ, ಜೆರಾಕ್ಸ್, ಫೋಟೊ ಸ್ಟುಡಿಯೋ, ಶಾಲಾ ಕಾಲೇಜು ವಿದ್ಯಾರ್ಥಿಗಳು, ಗೃಹಿಣಿಯರು ದಿನನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ ದಿನನಿತ್ಯ ವಿದ್ಯುತ್ ಕಣ್ಣುಮುಚ್ಚಾಲೆ ಜೋರಾಗಿದೆ ತಕ್ಷಣ ವಿದ್ಯುತ್ ಸಮಸ್ಯೆ ಬಗೆಹರಿಸಿ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಹಳೆಯ ವಿದ್ಯುತ್ ತಂತಿಗಳನ್ನು ತಕ್ಷಣ ಬದಲಾಯಿಸಬೇಕು. ಗುಣಮಟ್ಟದ ವಿದ್ಯುತ್ ಪೂರೈಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ತಕ್ಷಣ ಸಮಸ್ಯೆಯನ್ನು ಬಗೆಹರಿಸದಿದ್ದರೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. 30 ದಿನಗಳೊಳಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವುಂಟಾದರೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಮನವಿ ಸ್ವೀಕರಿಸಿದ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕುಮಾರ್ ಆಚಾರ್ ಮಾತನಾಡಿ, ಹೊನ್ನಾವರ ಪಟ್ಟಣದಲ್ಲಿ ಮೂರು ಫೀಡರ್‌ಗಳನ್ನು ಮಾಡಲಾಗಿದೆ. ಇನ್ನು ಮುಂದೆ ಪ್ರತೀ ಬುಧವಾರ ಅಥವಾ ದುರಸ್ತಿ ಸಮಯದಲ್ಲಿ ಇಡೀ ಹೊನ್ನಾವರ ಪಟ್ಟಣದಲ್ಲಿ ವಿದ್ಯುತ್ ಸ್ಥಗಿತ ಮಾಡುವುದಿಲ್ಲ. ಯಾವ ಫೀಡರ್ ವ್ಯಾಪ್ತಿಯಲ್ಲಿ ದುರಸ್ತಿ ಮಾಡಬೇಕಾಗಿದೆಯೋ ಆ ಭಾಗದಲ್ಲಿ ಮಾತ್ರ ವಿದ್ಯುತ್ ಸ್ಥಗಿತ ಮಾಡಲಾಗುವುದು. ಉಳಿದ ಭಾಗಗಳಲ್ಲಿ ನಿಲುಗಡೆ ಮಾಡಲಾಗುವುದಿಲ್ಲ. ಒಂದು ವಾರದಲ್ಲಿ ಈ ಕ್ರಮ ಜರಗಿಸಲಾಗುತ್ತದೆ ಎಂದು ತಿಳಿಸಿದರು.

ಧರಣಿಯಲ್ಲಿ ಮಾಜಿ ತಾಪಂ ಸದಸ್ಯ ಟಿ. ಎಸ್.ಹೆಗಡೆ ಕೊಂಡಕೆರೆ, ತಾಪಂ ಮಾಜಿ ಸದಸ್ಯ ರಾಜು ನಾಯ್ಕ, ಟಿ.ಟಿ. ನಾಯ್ಕ, ಬಾಲು ನಾಯ್ಕ ಆರ್. ಎಂ. ಹೆಗಡೆ, ಪಪಂ ಸದಸ್ಯ ನೀಲಕಂಠ ನಾಯ್ಕ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News