ತೆರಿಗೆ ಸಂಗ್ರಹಿಸುವ ಮೂಲಕ ಶೇಕಡಾವಾರು ಪ್ರಗತಿ ಸಾಧಿಸಿ: ಡಿಸಿ
ಮಡಿಕೇರಿ, ಜೂ.20: ಜಿಲ್ಲೆಯ ನಗರ ಮತ್ತು ಪಟ್ಟಣ, ಸ್ಥಳೀಯ ಸಂಸ್ಥೆಗಳು ತೆರಿಗೆ ಸಂಗ್ರಹದಲ್ಲಿ ಹಿಂದೆ ಬಿದ್ದಿದ್ದು, ತಕ್ಷಣ ಕಾರ್ಯ ಪ್ರವೃತ್ತರಾಗಿ ತೆರಿಗೆ ಸಂಗ್ರಹಿಸುವ ಮೂಲಕ ಶೇಕಡಾವಾರು ಪ್ರಗತಿ ಸಾಧಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಮಡಿಕೇರಿ ನಗರಸಭೆ, ವೀರಾಜಪೇಟೆ, ಕುಶಾಲನಗರ, ಸೋಮವಾರಪೇಟೆ ಪಟ್ಟಣ ಪಂಚಾಯತ್‌ಗಳಲ್ಲಿ ಉದ್ದಿಮೆ ಪರವಾನಿಗೆ, ಕುಡಿಯುವ ನೀರಿನ ತೆರಿಗೆ, ಜಾಹೀರಾತು ತೆರಿಗೆ, ವಾಣಿಜ್ಯ ಮಳಿಗೆ ಬಾಡಿಗೆ ಮತ್ತಿತರ ತೆರಿಗೆ ವಸೂಲಾತಿಯಲ್ಲಿ ಬಹಳ ಹಿಂದೆ ಉಳಿದಿದ್ದು, ತೆರಿಗೆ ಸಂಗ್ರಹ ಮಾಡುವ ನಿಟ್ಟಿನಲ್ಲಿ ಆಯಾ ವ್ಯಾಪ್ತಿಯ ಸಿಬ್ಬಂದಿ ತಂಡೋಪಾದಿಯಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಸ್ಪಷ್ಟ ಸೂಚನೆ ನೀಡಿದರು.
ತೆರಿಗೆ ಸಂಗ್ರಹದಲ್ಲಿ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಜು.15ರೊಳಗೆ ಬಾಕಿ ಇರುವ ತೆರಿಗೆಯನ್ನು ವಸೂಲಿ ಮಾಡಲು ಮುಂದಾಗಬೇಕು. ತೆರಿಗೆ ಸಂಗ್ರಹದಲ್ಲಿ ದುರುಪಯೋಗ ತಡೆಯುವ ನಿಟ್ಟಿನಲ್ಲಿ ಕಂಪ್ಯೂಟರೀಕರಣ ಮಾಡಬೇಕು. ಜೊತೆಗೆ ಆನ್‌ಲೈನ್ ಮೂಲಕ ತೆರಿಗೆ ಸಂಗ್ರಹಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹೇಳಿದರು. ಕಂಪ್ಯೂಟರೀಕರಣ ಮಾಡುವುದರಿಂದ ಯಾರೆಲ್ಲ ತೆರಿಗೆ ಪಾವತಿಸಿದ್ದಾರೆ. ತೆರಿಗೆ ಕಟ್ಟದಿರುವವರು ಯಾರೂ ಎಂಬ ಮಾಹಿತಿ ದೊರೆಯಲಿದೆ. ಹಾಗೆಯೇ ಜಿಲ್ಲೆಯ ನಗರಸಭೆ, ಪಟ್ಟಣ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಎಷ್ಟು ಮಂದಿ ತೆರಿಗೆದಾರರು ಇದ್ದಾರೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು. ಗೃಹಭಾಗ್ಯ ಯೋಜನೆಯಡಿ ಪೌರಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವುದು, ನಗರಸಭೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಆಗಬೇಕಿರುವ ಟೆಂಡರ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು. ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮ ಅನುಷ್ಠಾನಗೊಳಿಸಲು ಮುಂದಾಗುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ನಗರಸಭೆ ವ್ಯಾಪ್ತಿಯಲ್ಲಿ ಹೋಂ ಸ್ಟೇಗಳು ಎಷ್ಟಿವೆ ಎಂಬ ಬಗ್ಗೆ ಕೂಡಲೇ ಮಾಹಿತಿ ಒದಗಿಸುವಂತೆ ಪೌರಾಯುಕ್ತರಿಗೆ ನಿರ್ದೇಶನ ನೀಡಿದರು. 13ನೆ ಹಣಕಾಸು ಯೋಜನೆ ಅನುಷ್ಠಾನ ಹಾಗೂ ಅಂಬೇಡ್ಕರ್ ವಸತಿ ಯೋಜನೆ ಪ್ರಗತಿ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ಪಡೆದರು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್, ಜಿಲ್ಲೆಯ ನಗರಾಭಿವೃದ್ಧಿ ಸಂಬಂಧಿಸಿದಂತೆ ಕುಡಿಯುವ ನೀರಿನ ತೆರಿಗೆ ಸಂಗ್ರಹ, ಉದ್ದಿಮೆ ಪರವಾನಿಗೆ, ಜಾಹೀರಾತು ತೆರಿಗೆ, ವಾಣಿಜ್ಯ ಮಳಿಗೆ, ಆಸ್ತಿ ತೆರಿಗೆ ಮತ್ತಿತರ ಸಂಬಂಧ ಅವರು ಮಾಹಿತಿ ನೀಡಿದರು. ಪೌರಾಯುಕ್ತೆ ಬಿ.ಬಿ.ಪುಷ್ಪಾವತಿ ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಹೋಂ ಸ್ಟೇಗಳ ಸಮೀಕ್ಷೆ ನಡೆಯುತ್ತಿದ್ದು, ಒಂದು ವಾರದಲ್ಲಿ ವರದಿ ನೀಡಲಾಗುವುದು ಎಂದು ತಿಳಿಸಿದರು.
ಪೌರಾಡಳಿತ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಶಿವಪ್ರಕಾಶ್ ಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆ.ಎಂ.ರವಿಕುಮಾರ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಕಿರಿಯ ಇಂಜಿನಿಯರ್ ಶಿವಕುಮಾರ್ ಮತ್ತಿತರರು ಮಾಹಿತಿ ನೀಡಿದರು. ತೆರಿಗೆ ಸಂಗ್ರಹದ ವಿವರ: ಉದ್ದಿಮೆ ಪರವಾನಿಗೆಯಲ್ಲಿ ಶೇ.7.82 ರಷ್ಟು ಸಾಧನೆ, ನೀರಿನ ಕರ ವಸೂಲಿಯಲ್ಲಿ ಶೇ.5.86 ರಷ್ಟು ಸಾಧನೆ, ಜಾಹೀರಾತು ತೆರಿಗೆಯಲ್ಲಿ 2.14 ಸಾಧನೆ, ಆಸ್ತಿ ತೆರಿಗೆಯಲ್ಲಿ ಶೇ.62.59 ರಷ್ಟು ಸಾಧನೆ, ವಾಣಿಜ್ಯ ಮಳಿಗೆ ಬಾಡಿಗೆ ವಸೂಲಾತಿಯಲ್ಲಿ ಶೇ.14.23 ರಷ್ಟು ಸಾಧನೆ.