×
Ad

ಬಸ್ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಧರಣಿ

Update: 2016-06-20 23:19 IST

ಕಾರವಾರ, ಜೂ.20: ಬೃಹತ್ ಯೋಜನೆಗಳಲ್ಲಿ ಒಂದಾದ ಕೈಗಾದ ಅಣು ವಿದ್ಯುತ್ ಘಟಕದಲ್ಲಿ ಕಾರ್ಯ ನಿರ್ವಹಿಸುವ ಹೊರ ಗುತ್ತಿಗೆ ಕಾರ್ಮಿಕರು ಕಾರವಾರದಿಂದ ಕೈಗಾಕ್ಕೆ ತೆರಳಲು ಉಂಟಾದ ಬಸ್ ಸಮಸ್ಯೆಯನ್ನು ಪರಿಹರಿಸುವಂತೆ ಆಗ್ರಹಿಸಿ ಬಸ್ ಡಿಪೋ ಎದುರು ಕಾರ್ಮಿಕರು ಧರಣಿ ನಡೆಸಿದರು.

ಕಾರವಾರದಿಂದ 55ಕಿಮೀ ದೂರದಲ್ಲಿರುವ ಕೈಗಾ ಅಣು ವಿದ್ಯುತ್ ಘಟಕದಲ್ಲಿ ನೂರಕ್ಕೂ ಅಧಿಕ ಕಾರ್ಮಿಕರು ಹೊರ ಗುತ್ತಿಗೆಯ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿನ ಬಸ್ ಸಮಸ್ಯೆಯನ್ನು ಬಗೆಹರಿಸುವಂತೆ ಅಧಿಕಾರಿಗಳ ಬಳಿ ಸಾಕಷ್ಟು ಬಾರಿ ಆಗ್ರಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಎಲ್ಲ ಕಾರ್ಮಿಕರು ಪ್ರತಿನಿತ್ಯ ಕೈಗಾಕ್ಕೆ ತೆರಳುವುದರಿಂದ ಬಹುತೇಕರು ಎನ್‌ಡಬ್ಲುಕೆಆರ್‌ಟಿಸಿಯ ಮಾಸಿಕ ಬಸ್ ಪಾಸ್ ಮಾಡಿಸಿಕೊಂಡಿದ್ದು, ಸಾರಿಗೆ ಸಂಸ್ಥೆಯು ಕೈಗಾಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಮಾಡಿಲ್ಲ. ಹಿಂದೊಮ್ಮೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದ್ದಕ್ಕೆ ಕೆಂಪು ಬೋರ್ಡ್ ಬಸ್ ಒದಗಿಸಿದ್ದು ಇದರ ಟಿಕೆಟ್ ದರ ಸಾಮಾನ್ಯ ಬಸ್‌ಗಿಂತ ಹೆಚ್ಚಾಗಿದ್ದರಿಂದ ಪಾಸ್ ಇದ್ದರೂ ಹಣತೆತ್ತು ಹೋಗುವ ಸ್ಥಿತಿ ಎದುರಾಗಿದೆ. ಅಲ್ಲದೇ ಕೈಗಾಕ್ಕೆ ಸದಾಶಿವಗಡ ಮತ್ತು ಕಡವಾಡದಿಂದ ಸಾಗಲು ಎರಡು ಮಾರ್ಗವಿದ್ದರೂ, ಸದಾಶಿವಗಡ-ಕದ್ರಾ ಮಾರ್ಗವಾಗಿ ಬರುವ ಬಸ್‌ನಲ್ಲೂ ಪಾಸ್ ನಡೆಯುವುದಿಲ್ಲ ಎಂದು ಹಣ ವಸೂಲಿ ಮಾಡುತ್ತಾರೆ. ಬಸ್ ಸಂಚಾರ ಸಮಯಕ್ಕೆ ಸರಿಯಾಗಿರದೆ ತೊಂದರೆಯಾಗಿದೆ. ಅಲ್ಲದೆ ಮಳೆಗಾಲದಲ್ಲಿ ಸೋರುವ ಬಸ್ ಕೈಗಾಕ್ಕೆ ಬಿಡುವುದರಿಂದ ಪ್ರಯಾಣಕ್ಕೆ ತೀರಾ ಸಮಸ್ಯೆಯಾಗಿದೆ. ಈ ಸಮಸ್ಯೆಗಳನ್ನು ಪರಿಹರಿಸುವಂತೆ ಧರಣಿಕಾರರು ಡಿಪೋ ಮೆನೇಜರ್ ಅವರನ್ನು ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕೆ ಮೆನೇಜರ್ ಆಗಮಿಸುವವರೆಗೆ ಧರಣಿ ಮುಂದುವರಿಸುವುದಾಗಿ ಪಟ್ಟು ಹಿಡಿದರು.

 ಧರಣಿನಿರತರ ಪ್ರಶ್ನೆಗೆ ಉತ್ತರಿಸಲಾಗದ ಡಿಪೋ ಮೆನೇಜರ್ ತುಷಾರ್ ಅವಿತು ಕುಳಿತಿದ್ದರು. ಪ್ರಮುಖರು ಎನ್‌ಡಬ್ಲುಕೆಆರ್‌ಟಿಸಿ ಡಿಸಿ ಅವರನ್ನು ಸಂಪರ್ಕಿಸಿದ ಬಳಿಕ ಅವರ ಸೂಚನೆ ಮೇರೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮೆನೇಜರ್ ತುಷಾರ್, ಸಮಾಧಾನವಾಗಿ ಮಾತನಾಡುವ ಬದಲೂ ಪ್ರತಿಭಟನಾಕಾರರ ಮೇಲೆ ರೇಗಾಡಿದರು. ಇದರಿಂದ ಆಕ್ರೋಶಗೊಂಡ ಕಾರ್ಮಿಕರು, ಆ ಕಾರ್ಯವನ್ನು ಕಾನೂನುಬದ್ಧವಾಗಿ ನೀವೇ ಮಾಡಿ ಎಂದು ತಿರುಗೇಟು ನೀಡಿದರು. ಮೆನೇಜರ್ ಧರಣಿನಿರತರ ಜೊತೆ ಅಸಂಬದ್ಧವಾಗಿ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಯಿತು. ಶೀಘ್ರ ಬಸ್ ಸೌಲಭ್ಯ ಕಲ್ಪಿಸದಿದ್ದರೆ ಉಗ್ರ ಧರಣಿ ಕೈಗೊಳ್ಳುವುದಾಗಿ ಕಾರ್ಮಿಕರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪಿಎಸ್ಸೈ ಕುಸುಮಾಧಾರ, ಪ್ರಮುಖರಾದ ಮಾಧವ ನಾಯಕ, ವಿವೇಕ ಬಾಂದೇಕರ್, ಗಜಾನನ ನಾಯ್ಕ, ಕಿರಣ್ ಕೋಟಾರಕರ್, ಸಂದೀಪ್ ಕೋಟಾರಕರ್, ರಾಜೇಂದ್ರ ಕೋಟಾರಕರ್, ಉಲ್ಲಾಸ ನಾಯ್ಕ, ಪ್ರವೀಣ, ಸತೀಶ್ ಪವಾರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News