×
Ad

ಒಂದೇ ಕುಟುಂಬದ 6 ಮಂದಿ ಸಾವು

Update: 2016-06-20 23:20 IST

ಬೆಂಗಳೂರು, ಜೂ. 20: ಶರ ವೇಗವಾಗಿ ಹೋಗುತ್ತಿದ್ದ ಕಾರೊಂದು ರಸ್ತೆ ವಿಭಾಜಕಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಪಕ್ಕದ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಅಪ್ಪಳಿಸಿದ ಪರಿಣಾಮ ಇಬ್ಬರು ಮಕ್ಕಳು ಸೇರಿ ಆರು ಮಂದಿ ಮೃತಪಟ್ಟಿರುವ ದುರ್ಘಟನೆ ನೆಲಮಂಗಲ ರಸ್ತೆಯ ಕೆಂಪೋಹಳ್ಳಿ ಗೇಟ್ ಬಳಿ ಸೋಮವಾರ ನಡೆದಿದೆ.
ಮೃತರನ್ನು ಕೆಂಗೇರಿಯ ಬಾಬುಗೌಡ ಪಾಟೀಲ್(33) ಅವರ ಪತ್ನಿ ಸುಶ್ಮಿತಾ(28), ಅಣ್ಣ ಮಲ್ಲಪ್ಪಸಿದ್ದಪ್ಪ(40), ಅಕ್ಕ ನಾಗರತ್ನಾ(40), ಪುತ್ರ ಬಸವನಗೌಡ ಬಾಬುಗೌಡ ಪಾಟೀಲ್(8), ಅಣ್ಣನ ಪುತ್ರಿ ತನ್ಯಶ್ರೀ(15) ಎಂದು ಗುರುತಿಸಲಾಗಿದ್ದು, ಇವರೆಲ್ಲಾ ಗದಗ ಜಿಲ್ಲೆಯ ನರಗುಂದ ಕುಡಿ ಗ್ರಾಮದ ಒಂದೇ ಕುಟುಂಬದವರಾಗಿದ್ದಾರೆ.
 ಕುಟಂಬಸ್ಥರೆಲ್ಲಾ ಸೋಮವಾರ ಬೆಳಿಗ್ಗೆ ಹುಬ್ಬಳ್ಳಿಯ ಸಂಬಂಧಿಕರ ಮನೆಯಿಂದ ಕೆಂಗೇರಿಗೆ ವಾಪಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದ್ದು, ದಾಬಸಪೇಟೆ ಮಾರ್ಗದಿಂದ ನಗರಕ್ಕೆ ರಾಷ್ಟ್ರೀಯ ಹೆದ್ದಾರಿ4ರಲ್ಲಿ ವೇಗವಾಗಿ ಬರುತ್ತಿದ್ದ ಕಾರು ಕೆಂಪೋಹಳ್ಳಿ ಗೇಟ್ ಬಳಿ ಆಯತಪ್ಪಿ ರಸ್ತೆ ವಿಭಾಜಕಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಪಕ್ಕದ ರಸ್ತೆಯಲ್ಲಿ ನಿಂತಿದ್ದ ಕಂಟೇನರ್ ಲಾರಿಗೆ ಢಿಕ್ಕಿ ಹೊಡೆದಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
  ಕಾರಿನ ಢಿಕ್ಕಿಯ ರಭಸಕ್ಕೆ ಬಾಬುಗೌಡ ಪಾಟೀಲ್, ಬಸವನಗೌಡ ಬಾಬುಗೌಡ ಪಾಟೀಲ, ಮಲ್ಲಪ್ಪಸಿದ್ದಪ್ಪ ಹಾಗೂ ತನ್ಯಶ್ರೀ ಸ್ಥಳದಲ್ಲೇ ಮೃತಪ ಟ್ಟಿದ್ದು, ಸುಶ್ಮಿತಾ, ನಾಗರತ್ನ ಹರ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಇನ್ನೊಬ್ಬರು ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಅಪಘಾತದಿಂದಾಗಿ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದ್ದು, ಸುಮಾರು 1 ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರ ಸ್ಥಗಿತವಾಗಿತ್ತು. ನೆಲಮಂಗಲ ಪೊಲೀಸರು ಪರಿಹಾರ ಕಾರ್ಯ ಕೈಗೊಂಡು ಅಪಘಾತಕ್ಕೊಳಗಾಗಿದ್ದ ವಾಹನಗಳನ್ನು ತೆರವುಗೊಳಿಸಿದರು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂಬಂಧ ದಾಬಸ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News