ಕದ್ದುಮುಚ್ಚಿ ಸಭೆ ನಡೆಸುವ ಬಿಜೆಪಿ, ಕಾಂಗ್ರೆಸ್ :ಶಾಸಕ ಮಧು ಬಂಗಾರಪ್ಪ
ಸೊರಬ, ಜೂ.20: ತಾಪಂ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಜೆಡಿಎಸ್ ಬಹಿರಂಗವಾಗಿ ಮತದಾರರ ಮುಂದೆ ಸಭೆೆಗಳನ್ನು ನಡೆಸುತ್ತಿದ್ದಾರೆಯೇ ವಿನಃ, ಕಾಂಗ್ರೆಸ್ ಹಾಗೂ ಬಿಜೆಪಿಯವರ ಹಾಗೆ ಜನರ ಮುಂದೆ ಬಾರದೇ ಗೋದಾಮುಗಳಲ್ಲಿ ಕದ್ದುಮುಚ್ಚಿ ಸಭೆೆಗಳನ್ನು ನಡೆಸುತ್ತಿಲ್ಲ ಎಂದು ಶಾಸಕ ಮಧು ಬಂಗಾರಪ್ಪ ನುಡಿದರು. ಸೋಮವಾರ ತಾಲೂಕಿನ ಮಾವಲಿ ಗ್ರಾಮದಲ್ಲಿ ತಾಪಂ ಚುನಾವಣಾ ಪ್ರಚಾರ ಸಭೆೆಯಲ್ಲಿ ಪಾಲ್ಗೊಂಡು ಮಾತನಾಡಿ, ತಾಲೂಕಿನ ಜನತೆ ಜೆಡಿಎಸ್‌ನವರನ್ನು ಪ್ರೀತಿ ವಿಶ್ವಾಸದಿಂದ ಆಯ್ಕೆ ಮಾಡಿದ್ದಾರೆ. ಜೆಡಿಎಸ್ ಪಕ್ಷದ ವಿರುದ್ಧ ಹುರುಳಿಲ್ಲದ ವೈಯಕ್ತಿಕ ಟೀಕೆಯಲ್ಲಿ ಬಿಜೆಪಿಯವರು ತೊಡಗಿದ್ದಾರೆ. ಪ್ರಜ್ಞಾವಂತ ತಾಲೂಕಿನ ಜನತೆ ಇವರ ಕಾರ್ಯವನ್ನು ಮನಗೊಂಡು ವಿಧಾನ ಸಭೆ ಹಾಗೂ ಜಿಪಂ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಮಾಜಿ ಸಚಿವ ಹರತಾಳು ಹಾಲಪ್ಪನವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಆಶೀರ್ವಾದದಿಂದ ಜನತೆಯಲ್ಲಿ ಗುರುತಿಸಿಕೊಂಡಿದ್ದ ಹರತಾಳು ಹಾಲಪ್ಪರವರ ಸ್ವಯಂಕೃತ ಅಪರಾಧ ದಿಂದ ಅವರನ್ನು ತಾಲೂಕಿನ ಜನತೆ ತಿರಸ್ಕರಿಸಿದ್ದು, ನಮ್ಮ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ತಾಲೂಕಿನ ಮತದಾರರು ಪ್ರಬುದ್ಧರಾಗಿದ್ದು, ಯಾರು ತಾಲೂಕಿನ ಅಭಿವೃದ್ಧಿ ಮಾಡುತ್ತಾರೆ ಎಂಬುದನ್ನು ಮನಗಂಡಿದ್ದಾರೆ. ಬಂಗಾರಪ್ಪನವರ ಕುಟುಂಬದ ಆಸ್ತಿ ಬಗ್ಗೆ ಮಾತನಾಡಲು ಕುಟುಂಬದವರನ್ನು ಹೊರತು ಪಡಿಸಿ ಬೇರೆಯವರಿಗೆ ಹಕ್ಕಿಲ್ಲ. ಇದರ ಬಗ್ಗೆ ಕುತೂಹಲವಿದ್ದಲ್ಲಿ ನಮ್ಮ ಆಸ್ತಿಯನ್ನು ನೋಡಿಕೊಳ್ಳುವ ಮೇಲುಸ್ತುವಾರಿಯ ಜವಾಬ್ದಾರಿ ಕೆಲಸ ನೀಡಲು ಸಿದ್ಧ ಎಂದರು. ತಾಲೂಕಿನಲ್ಲಿ ಕೇವಲ ಮತಗಳಿಕೆಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿಯವರು ಜಾತ್ಯತೀತತೆಯ ಮಾತನಾ ಡುತ್ತಿದ್ದು, ಅಭ್ಯರ್ಥಿಗಳ ಆಯ್ಕೆಯಲ್ಲಿ ನಿಜವಾದ ಬಣ್ಣ ಬಯಲಾಗಿದೆ. ಆದರೆ ಜೆಡಿಎಸ್‌ನಲ್ಲಿ ಎಲ್ಲಾ ಜಾತಿ, ವರ್ಗದವರಿಗೂ ಅವಕಾಶ ನೀಡುವ ಮೂಲಕ ನಿಜವಾದ ಜಾತ್ಯತೀತ ಪಕ್ಷ ಎಂಬುದನ್ನು ಸಾಬೀತು ಪಡಿಸಿದೆ. ಈ ಬಾರಿ ತಾಪಂ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳೇ ಮೇಲುಗೈ ಸಾಧಿಸಲಿದ್ದು, ತಾಲೂಕಿನ 19 ಕ್ಷೇತ್ರಗಳಲ್ಲೂ ಜಯಗಳಿಸುವ ಮೂಲಕ ಮತದಾರರು ಕಾಂಗ್ರೆಸ್ ಹಾಗೂ ಬಿಜೆಪಿಯ ಹಣೆಬರಹ ಜೂ.28 ರಂದು ಬರೆಯಲಿದ್ದಾರೆ ಎಂದು ಭವಿಷ್ಯ ನುಡಿದರು. ಮಾವಲಿ ಕ್ಷೇತ್ರದ ತಾಪಂ ಚುನಾವಣಾ ಜೆಡಿಎಸ್ ಅಭ್ಯರ್ಥಿ ಅಮೃತಾ ಲೋಕೇಶ್ ಮತಯಾಚನೆ ಮಾಡಿದರು. ಸಭೆಯಲ್ಲಿ ಜಿಪಂ ಸದಸ್ಯೆ ತಾರಾ ಶಿವಾನಂದ, ಮುಖಂಡರಾದ ಎಚ್.ಗಣಪತಿ, ಸುರೇಶ್ ಬಿಳುವಾಣಿ, ಪುಟರಾಜ ಗೌಡ, ಶಿವಕುಮಾರ, ಗಿರಿಯಪ್ಪ, ಪರಸಪ್ಪ, ಲೋಕೇಶ್, ಘೋಷೇಂದ್ರ, ನಾಗೇಂದ್ರಪ್ಪ, ಹುಚ್ಚಪ್ಪ, ಪರಮೇಶಪ್ಪ, ರಾಜಪ್ಪ, ನೀಲಕಂಠಪ್ಪ, ಹನುಮಂತಮ್ಮ ಬೂದೇವಮ್ಮ, ಡಾಕಾಧರಪ್ಪ, ವಿನಾಯಕ ಮತ್ತಿತರರು ಉಪಸ್ಥಿತರಿದ್ದರು.