×
Ad

‘ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ಕೈಬಿಡಬೇಕು: ಗೀತಾ

Update: 2016-06-20 23:30 IST

ಚಿಕ್ಕಮಗಳೂರು, ಜೂ.20: ಭೂಮಿಯ ಫಲವತ್ತತೆಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ಕೈಬಿಡಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಗೀತಾ ಹೇಳಿದ್ದಾರೆ.

ತಾಲೂಕಿನ ಕರ್ತಿಕೆರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಘಟಕ ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸೋಮವಾರ ಏರ್ಪಡಿಸಿದ್ದ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಪೂರ್ವಿಕರು ಬಟ್ಟೆಯ ಕೈಚೀಲ ಮತ್ತು ಕಾಗದದ ಕವರ್‌ಗಳನ್ನು ಬಳಸುತ್ತಿದ್ದರು. ಅವು ಭೂಮಿಯಲ್ಲಿ ಕರಗಿ ಹೋಗುತ್ತಿದ್ದವು. ಇದರಿಂದಾಗಿ ಪರಿಸರ ಮಾಲಿನ್ಯವಾಗುತ್ತಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಮಿತಿಮೀರಿದ ಪ್ಲಾಸ್ಟಿಕ್ ಬಳಕೆಯಿಂದಾಗಿ ಭೂಮಿ ಫಲವತ್ತತೆಯನ್ನು ಕಳೆದುಕೊಂಡು ಬಂಜರಾಗುತ್ತಿದೆ ಎಂದು ವಿಷಾದಿಸಿದರು.

ನಾವು ಬಳಸುವ ಪ್ಲಾಸ್ಟಿಕ್ ವಸ್ತುಗಳು ಕರಗದೆ ಇರುವುದರಿಂದಾಗಿ ಅವು ಮಣ್ಣಿನಲ್ಲಿ ಬೆರೆತು ಕೃಷಿ ಭೂಮಿಗೆ ಮಾರಕವಾಗಿ ಪರಿಣಮಿಸಿವೆ. ಈಗಲಾದರೂ ಎಚ್ಚೆತ್ತು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಕೈಬಿಟ್ಟರೆ ಮುಂದಿನ ಪೀಳಿಗೆಗೆ ಕೃಷಿ ಭೂಮಿ ಉಳಿಯುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರು ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಾಲ ಪಡೆಯಲು ಮುಂದಾದಲ್ಲಿ ಯೋಜನೆ ವತಿಯಿಂದ ಶೇ.10 ರಷ್ಟು ಸಬ್ಸಿಡಿ ನೀಡಲಾಗುವುದು ಎಂದು ತಿಳಿಸಿದರು.

 ಬಳಿಕ ನಡೆದ ಗೋಷ್ಠಿಗಳಲ್ಲಿ ಕೃಷಿಯಲ್ಲಿ ಯಾಂತ್ರೀಕರಣದ ಮಹತ್ವ ಹಾಗೂ ಅವಕಾಶಗಳು, ತರಕಾರಿ ಬೆಳೆಗಳಲ್ಲಿ ಸಮಗ್ರ ಪೋಷಕಾಂಶ ನಿರ್ವಹಣೆ, ಕೃಷಿ ಹಾಗೂ ತೋಟಗಾರಿಕಾ ಇಲಾಖೆಯಲ್ಲಿ ರೈತರಿಗಿರುವ ಸೌಲಭ್ಯಗಳು ಮತ್ತು ಹಸಿರು ಇಂಧನದ ಮಹತ್ವ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು. ಗ್ರಾಪಂ ಅಧ್ಯಕ್ಷ ಆನಂದರಾಜ ಅರಸ್ ಅಧ್ಯಕ್ಷತೆ ವಹಿಸಿದ್ದರು. ರೈತ ಸಂಘದ ತಾಲೂಕು ಉಪಾಧ್ಯಕ್ಷ ಪುಟ್ಟರಾಜ ಅರಸ್,ಕೆ.ಟಿ.ರಾಮರಾಜ ಅರಸ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ಸಮನ್ವಯಾಧಿಕಾರಿ ಕೇಶವ ನಾಯ್ಕಾ, ತಾಲೂಕು ಯೋಜನಾಧಿಕಾರಿ ಬೇಬಿ, ಕೃಷಿ ತಜ್ಞೆ ಮಮತಾ, ಸಹಾಯಕ ಕೃಷಿ ಅಧಿಕಾರಿ ಮಲ್ಲಿಕಾರ್ಜುನ್, ತೋಟಗಾರಿಕಾ ಇಲಾಖೆಯ ಸಹಾಯಕ ಅಧಿಕಾರಿ ಚಂದ್ರಪ್ಪ, ಶಿವಣ್ಣ, ಶಶಿಧರ್ ಶುಭ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News