‘ಖಾಸಗಿ ಶಾಲೆಗಳ ಜೊತೆ ಪೈಪೋಟಿ ನಡೆಸಲು ಹೊಸಹೊಸ ಪ್ರಯೋಗ ಅಗತ್ಯ’

Update: 2016-06-20 18:05 GMT

ಸಾಗರ, ಜೂ.20: ಸರಕಾರಿ ಶಾಲೆಗಳು ಹೊಸಹೊಸ ಪ್ರಯೋಗಗಳನ್ನು ಅಳವಡಿಸಿಕೊಳ್ಳದೆ ಹೋದಲ್ಲಿ ಖಾಸಗಿ ಶಾಲೆಗಳ ಜೊತೆ ಪೈಪೋಟಿ ನಡೆಸಲು ಸಾಧ್ಯವಿಲ್ಲ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹೇಳಿದರು.

ತಾಲೂಕಿನ ಗೆಣಸಿನಕುಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸರಕಾರಿ ಶಾಲೆಗೆ ಮಕ್ಕಳನ್ನು ಕರೆತರುವ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಬದಲಾದ ದಿನಮಾನಗಳಲ್ಲಿ ಸರಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿವೆೆ. ಇಂತಹ ಹೊತ್ತಿನಲ್ಲಿ ಸರಕಾರಿ ಶಾಲೆಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸದೆ ಹೋದರೆ ಇನ್ನಷ್ಟು ಶಾಲೆಗಳು ಮುಚ್ಚುವ ಸಾಧ್ಯತೆ ಇದೆ. ಸರಕಾರ ಸಹ ಸರಕಾರಿ ಶಾಲೆಗಳನ್ನು ಆಧುನಿಕಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕಾಗಿದೆ ಎಂದರು. ಖಾಸಗಿ ಶಾಲೆಗಳು ಗ್ರಾಮಾಂತರ ಪ್ರದೇಶಗಳಿಗೆ ವಾಹನ ಸೌಲಭ್ಯವನ್ನು ನೀಡಿ, ಮಕ್ಕಳನ್ನು ತಮ್ಮ ಶಾಲೆಯತ್ತ ಸೆಳೆಯುತ್ತಿವೆ. ಇಂತಹ ಪ್ರಯೋಗವನ್ನು ಗೆಣಸಿನಕುಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಪ್ರಾರಂಭಿಸಿದೆ. ಇದರಿಂದ ಮಕ್ಕಳು ಸಹಜವಾಗಿ ಶಾಲೆಗೆ ದೂರದ ಹಳ್ಳಿಯಿಂದ ಬರಲು ಅನುಕೂಲವಾಗುತ್ತದೆ ಎಂದರು. ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಈ ಶಾಲೆಯಲ್ಲಿ ಆರಂಭಿಸಿದ ಪೂರ್ವ ಪ್ರಾಥಮಿಕ ಶಾಲೆಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ರಾಜ್ಯವ್ಯಾಪಿ ಈ ಮಾದರಿ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ. ಕಳೆದ ವರ್ಷಕ್ಕಿಂತ ಈ ಶಾಲೆಯಲ್ಲಿ 18 ಮಕ್ಕಳು ಹೊಸದಾಗಿ ದಾಖಲಾತಿಯಾಗಿರುವುದು ಆಶಾದಾಯಕ ಬೆಳವಣಿಗೆ. ಪೂರ್ವಪ್ರಾಥಮಿಕ ಶಾಲೆಯನ್ನು ಇಲ್ಲಿನ ಎಸ್‌ಡಿಎಂಸಿ ಉತ್ತಮವಾಗಿ ನಿಭಾಯಿಸುತ್ತಿದೆ ಎಂದರು. ಗ್ರಾಮ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ ಅವರು 14ಸಾವಿರ ರೂ. ವೆಚ್ಚದಲ್ಲಿ ಮಕ್ಕಳಿಗೆ ಉಚಿತವಾಗಿ ನೀಡಿದ ನೋಟ್ ಪುಸ್ತಕ ವಿತರಣೆ ಮಾಡಿ ಮಾತನಾಡಿದ ತಾಲೂಕು ಪಂಚಾಯತ್ ಸದಸ್ಯೆ ಸುವರ್ಣಾ ಟೇಕಪ್ಪ, ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ದಾನಿಗಳ ಕೊಡುಗೆ ಅಪಾರವಾಗಿದೆ. ಗ್ರಾಮೀಣ ಭಾಗದ ಮಕ್ಕಳು ಆರ್ಥಿಕವಾಗಿ ಹಿಂದುಳಿದಿರುತ್ತಾರೆ. ಅವರಿಗೆ ಶೈಕ್ಷಣಿಕ ಚಟುವಟಿಕೆ ಸಮರ್ಪಕವಾಗಿ ಮುಂದುವರೆಸಲು ಇಂತಹ ಸಹಕಾರ ಅಗತ್ಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಮಾಧವ ಕಾಮತ್ ಶಾಲೆಗೆ ಪರಿಕರಗಳನ್ನು ಕೊಡುಗೆಯಾಗಿ ನೀಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕುಮಾರ್ ಎನ್. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಶಿಕ್ಷಕಿ ವಿನೋದಾ ಜೋಷಿ, ಶಿಕ್ಷಕರಾದ ಸುಷ್ಮಾ, ಮಾಲಿನಿ, ಆಶಾ ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News