ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಸರಕಾರ ಸಿದ್ಧ: ಸಿಎಂ ಸಿದ್ದರಾಮಯ್ಯ

Update: 2016-06-20 18:25 GMT

ಬೆಂಗಳೂರು, ಜೂ.20: ರಾಜ್ಯದಲ್ಲಿ ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೊಳಿಸಲು ಸಿದ್ಧತೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

 ಸೋಮವಾರ ನಗರದ ಅಂಬೇಡ್ಕರ್ ಭವನದಲ್ಲಿ ಪ್ರಗತಿಪರ ಮಠಾಧೀಶರ ವೇದಿಕೆ ಆಯೋಜಿಸಿದ್ದ ಡಾ.ಬಿ.ಆರ್ ಅಂಬೇಡ್ಕರ್ ಅವರ 125ನೆ ಜನ್ಮ ದಿನಾಚರಣೆ ಹಾಗೂ ‘ಸಮಾನತೆಯ ಕಡೆಗೆ ನಮ್ಮ ನಡಿಗೆ’ ಎಂಬ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮನುಷ್ಯನ ಬದುಕಿಗೆ ಮಾರಕವಾಗಿರುವ ಮೂಢನಂಬಿಕೆಗಳ ವಿರುದ್ಧ ಹೋರಾಡಲು ಸರಕಾರವು ಬದ್ಧವಾಗಿದೆ. ಕೂಡಲೇ ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೊಳಿಸಲು ಸರಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದರು. ನಮ್ಮ ಹೋರಾಟ ಮೂಢನಂಬಿಕೆ ವಿರುದ್ಧವೇ ಹೊರತು ನಂಬಿಕೆಗಳ ವಿರುದ್ಧವಲ್ಲ ಎಂದು ತಿಳಿಸಿದರು.

ಕಾನೂನು ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಲಾಗುವುದು. ಸಾಧ್ಯವಾದರೆ ಮುಂದಿನ ಅಧಿವೇಶನದಲ್ಲಿ ಈ ಮಸೂದೆಯನ್ನು ಜಾರಿಗೊಳಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಕಾರು ಬದಲಾಯಿಸಿದ್ದು ಕಾಗೆ ಕುಳಿತಿದ್ದಕ್ಕಲ್ಲ...

  ತಾನು ಉಪಯೋಗಿಸುತ್ತಿದ್ದ ಕಾರಿಗೆ ಮೂರು ವರ್ಷಗಳಾಗಿದ್ದವು. ಅದಕ್ಕೆ ಬದಲಾಯಿಸಿದ್ದೇನೆಯೇ ವಿನಃ ಕಾಗೆ ಕುಳಿತಿದ್ದರಿಂದ ಬದಲಾಯಿಸಿದ್ದಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಸಿ.ಎಂ.ಕಾರಿನ ಮೇಲೆ ಕಾಗೆ ಕುಳಿತಿದೆ. ಇನ್ನು ಮುಂದೆ ಅವರಿಗೆ ಶನಿಕಾಟ ಕಾದಿದೆ. ಅವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂದ್ಲೆ ಟಿವಿ ಕಾರ್ಯಕ್ರಮಗಳಲ್ಲಿ ಹೇಳುತ್ತಿದ್ದ ಕೆಲವು ಜ್ಯೋತಿಷಿಗಳಿಗೆ ತಾನು ಉಪಯೋಗಿಸುವ ಹೊಸಕಾರಿನ ಮೇಲೆ ಒಂದೇ ಸಾರಿ ಐದು ಕಾಗೆಗಳನ್ನು ತಂದು ಬಿಡಿ ಎಂದು ಹೇಳಿದ್ದೇನೆ ಎಂದು ಹಾಸ್ಯಚಟಾಕಿ ಹಾರಿಸಿದರು.

ಸಂಪುಟ ವಿಸ್ತರಣೆಯಿಂದಾಗಿ ಅಸಮಾಧಾನಗೊಂಡಿರುವ ಶಾಸಕರು ನಮ್ಮ ಪಕ್ಷದವರೇ. ಅತೃಪ್ತ ಶಾಸಕರನ್ನು ಕೂಡಲೇ ಕರೆಸಿ ಮಾತನಾಡುತ್ತೇನೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News