ಇಸ್ರೋದಿಂದ ದಾಖಲೆಯ 20 ಉಪಗ್ರಹಗಳ ಉಡಾವಣೆಗೆ ಕ್ಷಣಗಣನೆ

Update: 2016-06-20 18:29 GMT

ಬೆಂಗಳೂರು, ಜೂ.20: ಇಸ್ರೋ ಜೂನ್ 22ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಏಕಕಾಲದಲ್ಲಿ ದಾಖಲೆ ಸಂಖ್ಯೆಯಲ್ಲಿ 20 ಉಪಗ್ರಹಗಳನ್ನು ಉಡಾವಣೆಗೊಳಿಸಲಿದ್ದು, ಇದಕ್ಕಾಗಿ 48 ಗಂಟೆಗಳ ಕ್ಷಣಗಣನೆ ಸೋಮವಾರ ಬೆಳಿಗ್ಗೆ 9:26ಕ್ಕೆ ಆರಂಭಗೊಂಡಿದೆ.

ಜೂನ್ 22ರಂದು ಬೆಳಿಗ್ಗೆ 9:26ಕ್ಕೆ ಪಿಎಸ್‌ಎಲ್‌ವಿ-ಸಿ34 ರಾಕೆಟ್ ಭಾರತದ ಭೂ ನಿರೀಕ್ಷಣಾ ಗಗನನೌಕೆ ಕಾರ್ಟೋಸ್ಯಾಟ್-2 ಸೇರಿದಂತೆ ಒಟ್ಟು 20 ಉಪಗ್ರಹಗಳೊಂದಿಗೆ ನಭಕ್ಕೆ ಚಿಮ್ಮಲಿದೆ ಎಂದು ಹಿರಿಯ ಇಸ್ರೋ ಅಧಿಕಾರಿಯೋರ್ವರು ತಿಳಿಸಿದರು.

ಈ ಹಿಂದೆ 2008ರಲ್ಲಿ ಇಸ್ರೋ ಒಂದೇ ಅಭಿಯಾನದಲ್ಲಿ 10 ಉಪಗ್ರಹಗಳನ್ನು ಉಡಾವಣೆಗೊಳಿಸಿತ್ತು.

ಪಿಎಸ್‌ಎಲ್‌ವಿ-ಸಿ34 ಒಟ್ಟು 560 ಕೆ.ಜಿ.ತೂಕದ 19 ಇತರ ಉಪಗ್ರಹಗಳನ್ನು 505 ಕೀ.ಮೀ.ದೂರದ ನಿಗದಿತ ಎಸ್‌ಎಸ್‌ಒ ಕಕ್ಷೆಯಲ್ಲಿರಿಸಲಿದೆ. ಇವುಗಳಲ್ಲಿ ಅಮೆರಿಕ,ಕೆನಡಾ,ಜರ್ಮನಿ ಮತ್ತು ಇಂಡೋನೇಷ್ಯಾದ ಜೊತೆ ಭಾರತೀಯ ವಿವಿಗಳ ಎರಡು ಉಪಗ್ರಹಗಳೂ ಸೇರಿವೆ. ಪಿಎಸ್‌ಎಲ್‌ವಿ-ಸಿ34 ಒಟ್ಟೂ 1,288 ಕೆ.ಜಿ.ತೂಕದ ಉಪಗ್ರಹಗಳನ್ನು ಹೊತ್ತೊಯ್ಯಲಿದೆ ಎಂದು ಇಸ್ರೋ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News