ಯು.ಟಿ. ಖಾದರ್ ಅವರ ರಮಝಾನ್ ದಿನಚರಿ ಏನು?
ಪವಿತ್ರ ರಮಝಾನ್ ಮಾಸದಲ್ಲಿ ಕೆಲಸದ ಎಷ್ಟೇ ಒತ್ತಡವಿದ್ದರೂ ನನ್ನ ಬಾಲ್ಯದ ದಿನಗಳಿಂದಲೂ ಪ್ರತಿವರ್ಷ ಉಪವಾಸವನ್ನು ಕಡ್ಡಾಯವಾಗಿ ಆಚರಿಸುತ್ತಿದ್ದೇನೆ. ಆ ಮೂಲಕ ಸರ್ವಶಕ್ತನಾದ ಅಲ್ಲಾಹನನ್ನು ಸ್ಮರಿಸುತ್ತೇನೆ.
ಬೆಳಗಿನ ಸಹರಿಗೂ ಒಂದು ಗಂಟೆ ಮೊದಲು ಎದ್ದು ನಿತ್ಯಕರ್ಮಗಳನ್ನು ಮುಗಿಸಿ ದುಆ (ಪ್ರಾರ್ಥನೆ) ಬಳಿಕ ಸಹರಿಗೆ ಕುಚ್ಚಲಕ್ಕಿ ಗಂಜಿ ಮತ್ತು ರೊಟ್ಟಿ- ಚಪಾತಿ, ಖರ್ಜೂರ, ಒಣ ಹಣ್ಣುಗಳು ಸೇರಿದಂತೆ ಮಿತ-ಆರೋಗ್ಯಕರ ಫಲಾಹಾರ ಸ್ವೀಕರಿಸುತ್ತೇನೆ. ‘ಅಝಾನ್’ನ ಧ್ವನಿ ಕೇಳುತ್ತಿದ್ದಂತೆ ನಮಾಝ್ ಮಾಡಲು ಮಸೀದಿಗೆ ತೆರಳುತ್ತೇನೆ.
ನನಗೆ ಪ್ರತಿನಿತ್ಯ ಯೋಗಾಭ್ಯಾಸವಿದ್ದು, ರಮಝಾನ್ ಮಾಸದಲ್ಲಿ ದೀರ್ಘಕಾಲದ ಯೋಗದ ಬದಲಿಗೆ ಅರ್ಧಗಂಟೆ ಕಾಲ ಯೋಗಾಭ್ಯಾಸ ಮಾಡುತ್ತೇನೆ. ಆನಂತರ ನನ್ನ ನಿತ್ಯದ ಕೆಲಸ-ಕಾರ್ಯಗಳಲ್ಲಿ ತೊಡಗುತ್ತೇನೆ. ರಮಝಾನ್ ಮಾಸಕ್ಕೆ ಹಾಗೂ ಉಪವಾಸಕ್ಕೆ ವಿಶೇಷ ಮಹತ್ವ ನೀಡುತ್ತೇನೆ.
ಮನೆಯಲ್ಲಿರುವ ಸಂದರ್ಭದಲ್ಲಿ ಉಪವಾಸ ಇರುವುದು ಗೊತ್ತಾಗುವುದಿಲ್ಲ. ತಾನು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದ ನಂತರ ನನ್ನ ದಿನಚರಿ ಸಂಪೂರ್ಣ ಬದಲಾಗಿದೆ. ಶಾಸಕ ಮತ್ತು ಸಚಿವನಾದ ಬಳಿಕವಂತೂ ಸದಾ ಕೆಲಸದ ಒತ್ತಡದ ಮಧ್ಯೆಯೇ ಇರಬೇಕು. ಅದು ಅನಿವಾರ್ಯವೂ ಹೌದು. ಹೀಗಾಗಿ ನನಗೆ ಇದೆಲ್ಲ ಹೊಸದೇನಲ್ಲ. ಉಪವಾಸ ನನಗೆ ಬಾಲ್ಯದಿಂದಲೇ ರೂಢಿಯಾಗಿರುವುದರಿಂದ ಸುಲಭವಾಗಿ ನಿಭಾಯಿಸುತ್ತೇನೆ.
ನಾನು ಮೊದಲಿನಿಂದಲೂ ಎಲ್ಲೇ ಇದ್ದರೂ ನಮಾಝ್‌ಗೆ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳುವುದಿಲ್ಲ. ಉಪವಾಸವನ್ನು ನಾನು ಸದಾ ಗೌರವಿಸುತ್ತೇನೆ. ಸಭೆ, ಸಮಾರಂಭಗಳಿಗೆ ತೆರಳಿದ ವೇಳೆ ತಾನು ಉಪವಾಸ ಇರುವುದನ್ನು ಅನ್ಯ ಸಮುದಾಯದ ಬಾಂಧವರೂ ಸೇರಿ ಎಲ್ಲರೂ ಗೌರವಿಸುತ್ತಾರೆ. ಕೆಲವರಂತೂ ನಾನು ಉಪವಾಸ ಇರುವುದು ತಿಳಿದು ಅವರು ಆಹಾರದ ಮಾತೇ ನನ್ನ ಬಳಿ ಆಡುವುದಿಲ್ಲ.
ನಾನು ಪ್ರಯಾಣದಲ್ಲಿರುವ ಸಂದರ್ಭಗಳಲ್ಲಿ ಸಹರಿ ಮತ್ತು ಇಫ್ತಾರ್‌ಗೆ ಮೊದಲೆ ಅಗತ್ಯ ಸಿದ್ಧತೆ ಮಾಡಿಕೊಂಡಿರುತ್ತೇನೆ. ಪ್ರಯಾಣದ ವೇಳೆ ಹಾಗೂ ಮನೆಯಲ್ಲಿ ಬಿಡುವಿನ ವೇಳೆ ಕುರ್‌ಆನ್ ಓದುವುದು, ಪ್ರವಾದಿ ಮುಹಮ್ಮದ್(ಸ) ಅವರ ಮೇಲೆ ದರೂದ್ ಓದುವುದನ್ನು ನಿತ್ಯ ಕಾಯಕವನ್ನಾಗಿಸಿಕೊಂಡಿದ್ದೇನೆ.
ಇಫ್ತಾರ್ ಕೂಟದಲ್ಲಿ ಎಲ್ಲರೊಂದಿಗೆ ಬೆರೆತು ಉಪವಾಸ ತೊರೆಯುವುದು ನನಗೆ ಬಹಳ ಇಷ್ಟ. ಹೀಗಾಗಿ ನಾನು ಎಲ್ಲೇ ಇರಲಿ, ಚಿಕ್ಕ ಮಸೀದಿ ಇದ್ದರೂ ಸರಿ ಇಫ್ತಾರ್‌ಗೆ ಕಡ್ಡಾಯವಾಗಿ ಮಸೀದಿಗೆ ಹೋಗುತ್ತೇನೆ. ಇಫ್ತಾರ್ ಬಳಿಕ ಅಲ್ಲೇ ನಮಾಝ್ ಮುಗಿಸಿ ಮತ್ತೆ ನನ್ನ ನಿತ್ಯ ಕಾರ್ಯಚಟುವಟಿಕೆಗಳಲ್ಲಿ ತೊಡಗುತ್ತೇನೆ.
ರಮಝಾನ್ ಉಪವಾಸದ ಸಂದೇಶ ಹಸಿವು, ಬಡತನ, ಸೌಹಾರ್ದತೆ, ಬಡವ-ಬಲ್ಲಿದನೆಂಬ ಭೇದ-ಭಾವವಿಲ್ಲದೆ ಏಕತೆ ಸಾರುತ್ತದೆ. ರಮಝಾನ್ ಮಾಸದಲ್ಲಿ ಅಲ್ಲಾಹನು ನಮ್ಮ ಪ್ರಾರ್ಥನೆಗೆ ಸ್ಪಂದಿಸುತ್ತಾನೆಂಬ ನಂಬಿಕೆ ನನಗಿದೆ. ನಾನು ಪ್ರಾರ್ಥನೆ ಸಲ್ಲಿಸುವ ವೇಳೆ ಎಲ್ಲರಿಗೂ ಆರೋಗ್ಯ-ಸಂತೋಷ ದಯಪಾಲಿಸುವಂತೆ ಕೋರುತ್ತೇನೆ.
ಉಮ್ರಾ
‘ಬೇರೆ ದಿನಗಳಿಗಿಂತ ಪವಿತ್ರ ರಮಝಾನ್ ಮಾಸದಲ್ಲಿ ಉಪವಾಸವಿದ್ದು ‘ಉಮ್ರಾ’ಯಾತ್ರೆ ಕೈಗೊಳ್ಳುವುದು ಮುಸ್ಲಿಮರಿಗೆ ಶ್ರೇಷ್ಠ ಎಂಬ ನಂಬಿಕೆ. ಆ ಹಿನ್ನೆಲೆಯಲ್ಲಿ ತಾನು ಕೂಡ ಕುಟುಂಬ ಸದಸ್ಯರೊಂದಿಗೆ ಉಮ್ರಾಯಾತ್ರೆ ತೆರಳುತ್ತಿದ್ದೇನೆ’.
-ಯು.ಟಿ.ಖಾದರ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ.