ಪರಿಸರ ಸ್ನೇಹಿ ಅನಿಲ ಆಧಾರಿತ ವಿದ್ಯುತ್ ಉತ್ಪಾದನೆಗೆ ಆದ್ಯತೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಜೂ. 21: ಮುಂದಿನ ಐದು ವರ್ಷದಲ್ಲಿ ರಾಜ್ಯದಲ್ಲಿ 9ಸಾವಿರ ಮೆ.ವ್ಯಾ.ವಿದ್ಯುತ್ ಉತ್ಪಾದಿಸಲಾಗುವುದಲ್ಲದೆ, ಪರಿಸರ ಹಾನಿ ತಡೆಯುವ ದೃಷ್ಟಿಯಿಂದ ಅನಿಲ ಆಧಾರಿತ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಮಂಗಳವಾರ ಯಲಹಂಕ ಸಮೀಪ ರಾಜ್ಯದಲ್ಲಿಯೇ ಪ್ರಪ್ರ ಥಮ ಅನಿಲ ಆಧರಿತ 370 ಮೆ.ವ್ಯಾ. ಸಾಮರ್ಥ್ಯದ ಯಲಹಂಕ ಸಂಯುಕ್ತ ಆವರ್ತಕ ವಿದ್ಯುತ್ ಸ್ಥಾವರ ಸ್ಥಾಪನೆಯ ಆರಂಭಿಕ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಜಾಗತಿಕ ತಾಪಮಾನ ಕಾಪಾಡಿಕೊಳ್ಳುವ ಜವಾಬ್ದಾರಿಯ ಬದ್ಧ್ದತೆ ಯೊಂದಿಗೆ ಸರಕಾರ ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಯಲ್ಲಿ ಮಹತ್ತರ ಹೆಜ್ಜೆ ಇಟ್ಟಿದ್ದು, ಈಗಾಗಲೇ ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ದೇಶದ ಗಮನ ಸೆಳೆದಿರುವ ಕರ್ನಾಟಕ ಸರಕಾರ ಮಹತ್ವಾಕಾಂಕ್ಷಿಯ ಅನಿಲ ವಿದ್ಯುತ್ ಸ್ಥಾವರದ ಸ್ಥಾಪನೆಗೆ ಮುಂದಾಗಿದೆ ಎಂದು ಅವರು ತಿಳಿಸಿದರು.
ಮುಂಬರುವ ದಿನಗಳಲ್ಲಿ ಕೈಗಾರಿಕೆ, ಕೃಷಿ ಹಾಗೂ ಗ್ರಾಹಕರಿಗೆ ವಿದ್ಯುತ್ ಸಮಸ್ಯೆಯಾಗದಂತೆ ಉತ್ಪಾದನೆ ಮತ್ತು ವಿತರಣೆ ಎರಡಕ್ಕೂ ಆದ್ಯತೆ ನೀಡಲಾಗುವುದು. ಅಲ್ಲದೆ ಹಲವಾರು ಸುಧಾರಣೆಗಳ ಮೂಲಕ ಗುಣಮಟ್ಟದ ವಿದ್ಯುತ್ ಪೂರೈಸಲಾಗುವುದು ಎಂದರು.
ಕರ್ನಾಟಕ ವಿದ್ಯುತ್ ನಿಗಮವು ಆರಂಭದಲ್ಲಿ 750ಮೆ.ವ್ಯಾ.ವಿದ್ಯುತ್ ಉತ್ಪಾದಿಸಲಾಗುತ್ತಿತ್ತು. ಪ್ರಸ್ತುತ 6250 ಮೆ.ವ್ಯಾ.ಉತ್ಪಾದಿಸಲಾಗುತ್ತಿದೆ. ಆದರೂ ವಿದ್ಯುತ್ ಬೇಡಿಕೆ ತೀವ್ರವಾಗಿದ್ದು, ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದಿಸಲು ಸರಕಾರ ಎಲ್ಲ್ಲ ರೀತಿಯ ಯೋಜನೆಗಳನ್ನು ರೂಪಿಸಲು ಮುಂದಾಗಿದೆ ಎಂದರು.
ಆಧುನಿಕ ಬದಲಾವಣೆ ಹಾಗೂ ಅಭಿವೃದ್ಧಿಗೆ ನೀರು, ವಿದ್ಯುತ್ ಅತ್ಯಾವಶ್ಯಕ ಇದರಿಂದಾಗಿ ಜಲವಿದ್ಯುತ್ ಉತ್ಪಾದನೆಗೆ ನೀರು ಹೆಚ್ಚು ಬೇಕಾಗುತ್ತಿದ್ದು, ನೀರನ್ನು ಉಳಿಸುವ ದೃಷ್ಟಿಯಿಂದ ಅನಿಲ ಆಧರಿತ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.
ಇತೀಚೆಗೆ ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ದಲ್ಲಿ ವಿದೇಶಿ ಕೈಗಾರಿಕೋದ್ಯಮಿಗಳು ವಿದ್ಯುತ್ ಸೇರಿದಂತೆ ರಾಜ್ಯದ ಮೂಲ ಸೌಕರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾಗಿ ವಿದ್ಯುತ್ ಉತ್ಪಾದಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವನಾಥ್ ಅವರ ಬೇಡಿಕೆಯಂತೆ ಪುಟ್ಟೇನಹಳ್ಳಿ ಕೆರೆ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಘೋಷಿಸಿದರು. ಸಮಾರಂಭದಲ್ಲಿ ‘ಅನಿಲ ವಿದ್ಯುತ್ ಸ್ಥಾವರ ವಿತರಣೆ’ ಕಿರುಹೊತ್ತಿಗೆ ಬಿಡುಗಡೆ ಮಾಡಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿದೆ. ಜನಸಂಖ್ಯೆಯು ತೀವ್ರಗೊಳ್ಳುತ್ತಿದೆ. ಕೈಗಾರಿಕೆ, ವ್ಯಾಪಾರ, ವ್ಯವಹಾರಗಳು ಹೆಚ್ಚುತ್ತಿವೆ. ಇದರಿಂದಾಗಿ ಬೆಂಗಳೂರಿನ ಜನರಿಗೆ ನಿರಂತರವಾಗಿ ವಿದ್ಯುತ್ ಕಲ್ಪಿಸಲು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ 1,500 ಕೋಟಿ ರೂ.ವೆಚ್ಚದಲ್ಲಿ ಅನಿಲ ಆಧರಿತ 370ಮೆ.ವ್ಯಾ.ವಿದ್ಯುತ್ ಉತ್ಪಾದಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ವಿದ್ಯುತ್ ಉತ್ಪಾದನೆ ಮಾಡುವುದರ ಜೊತೆಗೆ ವಿತರಣೆ ಕಡೆಯುಗಮನ ಹರಿಸಲಾಗಿದೆ. ರೈತರಿಗಾಗುವ ತೊಂದರೆ ತಪ್ಪಿಸುವ ದೃಷ್ಟಿ ಯಿಂದ ತಾಲೂಕಿಗೊಂದು ಟ್ರಾನ್ಸ್‌ಫಾರ್ಮರ್ ದುರಸ್ತಿ ಕೇಂದ್ರ ಗಳನ್ನು ಆರಂಭಿಸಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.
ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ಮಾತನಾಡಿ, ಕೇಂದ್ರ ಸರಕಾರದಲ್ಲಿ ವಿದ್ಯುತ್ ಸಚಿವರಾಗಿದ್ದಾಗ ಮಹಾರಾಷ್ಟ್ರದ ದಾಬೋಲ್‌ನಿಂದ ಬೆಂಗಳೂರಿನಿಂದ ಬಿಡದಿವರೆಗೆ 1ಸಾವಿರ ಕಿ.ಮೀ. ಪೈಪ್‌ಲೈನ್ ಮೂಲಕ ಅನಿಲ ಸಾಗಣೆಗೆ ಒತ್ತು ನೀಡಿದ್ದರ ಫಲವಾಗಿ ಅನಿಲ ಆಧರಿತ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತಿದೆ. ‘ಒನ್‌ಗ್ರಿಡ್ ಒನ್‌ನೇಷನ್’ ಪರಿಕಲ್ಪನೆಯಡಿಯಲ್ಲಿ ವಿದ್ಯುತ್ ಸಾಗಾಣೆ ಬಗ್ಗೆಯು ಗಮನ ಹರಿಸಲಾಗಿದೆ. ಈಗಾಗಲೇ ಕೈಗಾರಿಕೆ ಅಭಿವೃದ್ಧ್ದಿಯಲ್ಲಿ ಕರ್ನಾಟಕ ದೇಶದಲ್ಲೇ 3ನೆ ಸ್ಥಾನದಲ್ಲಿದ್ದು, ಮುಂದೆ ಮೊದಲ ಸ್ಥಾನ ಪಡೆಯಬೇಕೆಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಶಾಸಕ ಎಸ್.ಆರ್.ವಿಶ್ವನಾಥ್, ಮೇಲ್ಮನೆ ಸದಸ್ಯರಾದ ರಾಮ ಚಂದ್ರಗೌಡ, ನಾರಾಯಣಸ್ವಾಮಿ, ಗೋವಿಂದರಾಜು, ಬಿಬಿಎಂಪಿ ಸದಸ್ಯೆ ಪದ್ಮಾವತಿ ಅಮರನಾಥ್, ಬಿಎಚ್‌ಇಎಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅನೀಲ್‌ಸೊಪ್ತಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರ್ ನಾಯಕ್ ಹಾಜರಿದ್ದರು.