×
Ad

ಉತ್ತಮ ಆರೋಗ್ಯಕ್ಕೆ ಸ್ವಚ್ಛ ಪರಿಸರ ಅಗತ್ಯ: ಠಾಣೇಕರ್

Update: 2016-06-21 23:14 IST

ಕಾರವಾರ, ಜೂ.21: ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮತ್ತು ವೈಯಕ್ತಿಕ ಆರೋಗ್ಯಕ್ಕೆ ಸ್ವಚ್ಛ ಪರಿಸರ ಅಗತ್ಯವಾಗಿದೆ ಎಂದು ನಗರಸಭೆ ಉಪಾಧ್ಯಕ್ಷೆ ಲೀಲಾಬಾಯಿ ಠಾಣೇಕರ್ ಹೇಳಿದರು.

ಅವರು ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಭವನದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮನುಷ್ಯನಿಗೆ ಆರೋಗ್ಯವೇ ಭಾಗ್ಯ, ಆರೋಗ್ಯ ಸಂಪತ್ತು ಚೆನ್ನಾಗಿರಬೇಕು. ನಮ್ಮ ಆರೋಗ್ಯ ಚೆನ್ನಾಗಿರಬೇಕೆಂದರೆ ನಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.

ವಾತಾವರಣ ಸ್ವಚ್ಛವಿಲ್ಲದಿದ್ದಾಗ ಸೊಳ್ಳೆಗಳ ಉತ್ಪಾದನೆ ಹೆಚ್ಚಾಗಿ ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಇಲ್ಲಿ ನಾವು ಸಭೆ ಸೇರಿರುವ ಉದ್ದೇಶವೇ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವುದಾಗಿದೆ. ನಾಗರಿಕರು ಬೇಜವಾಬ್ದಾರಿ ತೋರಿಸದೆ ತಮ್ಮ ತಮ್ಮ ಸುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಿಲು ಸಹಕಾರಿಯಾಗುತ್ತದೆ. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಿದ್ದು, ಈ ಕಾರ್ಯಕ್ರಮ ಎಲ್ಲರಿಗೂ ಸದುಪಯೋಗವಾಗಲಿ ಎಲ್ಲ ಜನರಿಗೂ ಮಾಹಿತಿ ದೊರೆಯಲಿ ಎಂದರು. ಪ್ರಾಸ್ತಾವಿಕವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಿ.ಎನ್.ಅಶೋಕ್ ಕುಮಾರ್ ಮಾತನಾಡಿ, ಮಳೆಗಾಲದಲ್ಲಿ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿರುತ್ತದೆ. ಹೆಣ್ಣು ಅನಫಿಲೀಸ್ ಸೊಳ್ಳೆ ಕಚ್ಚುವುದರ ಮೂಲಕ ಮಲೇರಿಯಾ ಸಾಂಕ್ರಾಮಿಕ ರೋಗ ಹರಡುತ್ತದೆ. ಕಳೆದ ವರ್ಷ 86 ಪ್ರಕರಣಗಳಿದ್ದು. ಈ ವರ್ಷ ಇಲ್ಲಿಯವರೆಗೆ 14ಪ್ರಕರಣಗಳು ಕಂಡು ಬಂದಿವೆ. 2020ರ ವೇಳೆಗೆ ಮಲೇರಿಯಾ ನಿರ್ಮೂಲನೆಗೆ ಪಣ ತೊಡಲಾಗಿದೆ. ಮಲೇರಿಯಾ ಮುಕ್ತ ಸಮಾಜ ನಿರ್ಮಿಸೋಣ ಎಂದರು. ಡಾ. ರಮೇಶ ರಾವ್ ಮಾತನಾಡಿ, ಅನಾದಿಕಾಲದಿಂದಲೂ ಮಲೇರಿಯಾ ಕಾಯಿಲೆ ಮಾನವ ಕುಲಕ್ಕೆ ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ಮಲೇರಿಯಾವು ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಹೆಚ್ಚುವ ಸಂಭವವಿರುತ್ತದೆ. ಮಳೆಗಾಲವಾದ್ದರಿಂದ ಜನಜಾಗೃತಿ ಮೂಡಿಸಿ ನಿಯಂತ್ರಿಸಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷೆ ಪ್ರಮೀಳಾ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News