×
Ad

ಯೋಗ ಮಾನಸಿಕ, ದೈಹಿಕ ಸ್ಥಿತಿಯನ್ನು ಜೋಡಿಸುವ ಒಂದು ಕ್ರಿಯೆ: ಶ್ರೀನಿವಾಸ್ ಮಹಾಲೆ

Update: 2016-06-21 23:16 IST

ಭಟ್ಕಳ, ಜೂ.21: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಶಿರಾಲಿಯ ಜನತಾ ವಿದ್ಯಾಲಯ ಪ್ರೌಢ ಶಾಲೆಯಲ್ಲಿ ಯೋಗ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉದ್ಯಮಿ ಶ್ರೀನಿವಾಸ್ ಮಹಾಲೆ, ಜೂ. 21ರಂದೇ ಯೋಗ ದಿನಾಚರಣೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲು ಪ್ರಧಾನಿ ಮೋದಿಯವರು ಕರೆ ನೀಡಿದ್ದಕ್ಕೂ ಕಾರಣವಿದೆ. ಅಂದು ಅತ್ಯಂತ ದೊಡ್ಡ ಹಗಲು ಇರುವುದನ್ನು ಮನಗಂಡೇ ಆರಿಸಲಾಗಿದೆ. ಯೋಗ ಒಂದು ವ್ಯಾಯಾಮವಲ್ಲ ಅದು ಮಾನಸಿಕ, ದೈಹಿಕ ಸ್ಥಿತಿಯನ್ನು ಜೋಡಿಸುವಂತಹ ಕ್ರಿಯೆಯಾಗಿದೆ. ಯೋಗವನ್ನು ಯಾವುದೇ ಒತ್ತಡವಿಲ್ಲದೆ ಮಾಡಿದಾಗ ಮಾತ್ರ ನಮಗೆ ಅತ್ಯಂತ ಹೆಚ್ಚಿನ ಲಾಭ ದೊರೆಯುವುದು ಎಂದು ಹೇಳಿದರು. ಮುಖ್ಯ ಅತಿಥಿ ಡಾ. ಆರ್.ವಿ.ಸರಾಫ್ ಮಾತನಾಡಿ, ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡರೆ ರೋಗದಿಂದ ದೂರವಿರಬಹುದು. ಯೋಗಪಟುಗಳು ತಮ್ಮ ಜೀವನದಲ್ಲಿ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕು. ಯೋಗವನ್ನು ಗುರುಗಳ ಮಾರ್ಗದರ್ಶನದಲ್ಲಿಯೇ ಕಲಿಯಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನತಾ ವಿದ್ಯಾಲಯ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಎಂ. ಇ. ನಾಯ್ಕ ವಹಿಸಿದ್ದರು. ಇನ್ನೋರ್ವ ಅತಿಥಿ ಪತ್ರಕರ್ತ ರಾಧಾಕೃಷ್ಣ ಭಟ್, ಯೋಗ ಗುರು ಗೋವಿಂದ ದೇವಾಡಿಗ ಮಾತನಾಡಿದರು. ಆಶಾ ಭಟ್ ಸ್ವಾಗತಿಸಿದರು. ಆಶಾ ಕಲ್ಮನೆ ನಿರೂಪಿಸಿದರು. ಸುಕನ್ಯಾ ಭಟ್ ವಂದಿಸಿದರು. ಕಾರ್ಯಕ್ರಮಕ್ಕೂ ಪೂರ್ವ ವಿದ್ಯಾರ್ಥಿಗಳಿಂದ ಯೋಗ ಪ್ರಾತ್ಯಕ್ಷಿತೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News