×
Ad

ಅವ್ಯವಸ್ಥೆಯ ಆಗರವಾದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ

Update: 2016-06-21 23:17 IST

ಹೊನ್ನಾವರ, ಜೂ.21: ಪಟ್ಟಣದ ಬಸ್ ನಿಲ್ದಾಣವು ಅವ್ಯವಸ್ಥೆಯ ಆಗರವಾಗಿದ್ದು, ಇಲ್ಲಿನ ಶಾಸಕಿ ಶಾರದಾ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿ, ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಡಿಪೋ ಮೆನೇಜರ್‌ರವರಿಗೆ ಸೂಚಿಸಿದರು.

ಇಲ್ಲಿನ ಬಸ್ ನಿಲ್ದಾಣದ ದುರವಸ್ಥೆಯನ್ನು ಪರಿಶೀಲಿಸಿದ ಶಾಸಕಿ ಶಾರದಾ ಮೋಹನ್ ಶೆಟ್ಟಿ ಪತ್ರಕರ್ತರೊಂದಿಗೆ ಮಾತನಾಡಿ, ಹೊಸ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು. 6 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧದ ಕಾಮಗಾರಿ ಆರಂಭವಾಗಿದೆ. 30 ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ಮಾರ್ಗ ಸುಧಾರಣೆ ಕಾಮಗಾರಿ ನಡೆದಿದೆ ಎಂದು ತಿಳಿಸಿದರು.

ಹರಿದು ಬೀಳುತ್ತಿದ್ದ ಕೆನೊಫಿಯನ್ನು ತಕ್ಷಣ ತೆರವುಗೊಳಿಸುವಂತೆ ಸೂಚಿಸಿದ ಅವರು, ಬಸ್ ನಿಲ್ದಾಣದ ಸುತ್ತಲಿನ ಕೊಳಚೆಯನ್ನು ಮುಚ್ಚಿಹೋದ ಗಟಾರನ್ನು, ಸೋರುವ ಬಸ್ ನಿಲ್ದಾಣವನ್ನು ವೀಕ್ಷಿಸಿ ಡಿಪೋ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡರು. ದುರಸ್ತಿ ಕಾಣದೇ ಹಲವು ವರ್ಷಗಳಾಗಿವೆ. ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಬಸ್‌ನಿಲ್ದಾಣದ ಪ್ರವೇಶ ದ್ವಾರದ ಮೇಲ್ಛಾವಣಿಯ ಕಾಂಕ್ರಿಟ್ ಕಿತ್ತು ಪ್ರಯಾಣಿಕರ ತಲೆ ಮೇಲೆ ಬೀಳುವಂತಾಗಿದ್ದು ಸಾರಿಗೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಪ್ರಯಾಣಿಕರು ಭಯದಿಂದ ಬಸ್‌ನಿಲ್ದಾಣದೊಳಗೆ ಪ್ರವೇಶಿಸುವಂತಾಗಿದೆ.

ಮಳೆನೀರು ಹರಿದು ಹೋಗದೆ ಬಸ್ ನಿಲ್ಲುವ ಸ್ಥಳದಲ್ಲಿ ನೀರು ತುಂಬಿ ಪ್ರಯಾಣಿಕರಿಗೆ ಕಿರಿಕಿರಿಯಾಗುತ್ತಿದೆ. ಮಳೆ ಜೋರಾದಾಗ ಮಾಡಿನ ಹರಣಿಗಳು ತುಂಬಿ ನೀರು ಸೋರುತ್ತದೆ. ಪ್ರಯಾಣಿಕರು ಮಳೆಯಲ್ಲಿ ನೆನೆದು ಬಸ್ ಹತ್ತಬೇಕಾದ ಪರಿಸ್ಥಿತಿಯಿದೆ. ಬಸ್‌ನಿಲ್ದಾಣದ ಆವರಣ ಸ್ವಚ್ಛತೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಬಸ್ ನಿಲ್ದಾಣದ ಅಂಚಿನ ಗಟಾರದಲ್ಲಿ ಕಸಕಡ್ಡಿಗಳು ತುಂಬಿದ್ದು ಮಳೆಯ ನೀರು ಪಕ್ಕದ ಕಾಂಪೌಂಡ್‌ಗಳಿಗೆ ನುಗ್ಗುತ್ತಿದೆ. ಈ ಅವ್ಯವಸ್ಥೆಗಳನ್ನು ತಕ್ಷಣ ಸರಿಪಡಿಸುವಂತೆ ಶಾಸಕಿ ಶಾರದಾ ಮೋಹನ ಶೆಟ್ಟಿ ಡಿಪೋ ಮೆನೇಜರ್ ಅವರಿಗೆ ತಾಕೀತು ಮಾಡಿದರು.

ಹೊಸ ಡಿಪೋ ಹಾಗೂ ಬಸ್ ನಿಲ್ದಾಣ ನಿರ್ಮಿಸಲು ಹೆದ್ದಾರಿ ಪಕ್ಕದಲ್ಲಿ ಭೂಮಿ ಲಭ್ಯವಿಲ್ಲ, ಹಣ ಮಂಜೂರಾಗಿದೆ. ಬೇರೆ ಸ್ಥಳ ಸಿಗದಿದ್ದಲ್ಲಿ ಈಗಿದ್ದ ಬಸ್ ನಿಲ್ದಾಣದ ಎದುರು ಗುಡ್ಡಕ್ಕೆ ಹೊಂದಿಕೊಂಡು ಹೊಸ ಬಸ್ ನಿರ್ಮಾಣ ನಿರ್ಮಿಸಿ ಈಗಿರುವುದನ್ನು ತೆರವುಗೊಳಿಸಲಾಗುವುದು ಎಂದು ಶಾಸಕಿ ಹೇಳಿದರು. ಅಲ್ಲಿಯವರೆಗೆ ಬಸ್ ನಿಲ್ದಾಣವನ್ನು ಸೂಕ್ತವಾಗಿ ನಿರ್ಮಿಸಬೇಕು ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳನ್ನು ಎಚ್ಚರಿಸಿದರು.

ಬಸ್ ನಿಲ್ದಾಣದ ಅಂಗಡಿಗಳು ದುಬಾರಿಯಾಗಿದ್ದು ಕ್ಯಾಂಟಿನ್ ಮತ್ತು ಪುಸ್ತಕದಂಗಡಿ ಮುಚ್ಚಿದೆ. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲು ದುಬಾರಿ ಬಾಡಿಗೆಯಿಂದ ಸಾಧ್ಯವಾಗುತ್ತಿಲ್ಲ. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲು ಲೋಕೋಪಯೋಗಿ ಇಲಾಖೆಯ ದರದಲ್ಲಿ ಅಂಗಡಿಗಳನ್ನು ಲಾಟ್ ಎತ್ತಿ ಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು. ಸರಕಾರದೊಂದಿಗೆ ಈ ಕುರಿತು ಮಾತನಾಡುವುದಾಗಿ ಶಾಸಕಿ ಹೇಳಿದರು.

 ಈ ಸಂದರ್ಭದಲ್ಲಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಮಹೇಶ್ ಕುರಿಯವರ, ಹಳದೀಪುರ ಗ್ರಾಪಂ ಸದಸ್ಯ ವಿನಾಯಕ ಶೇಟ್, ಪಟ್ಟಣ ಪಂಚಾಯತ್ ಸದಸ್ಯ ಸುರೇಶ್ ಮೇಸ್ತ, ಹುಸೈನ್ ಖಾದ್ರಿ, ಅಜಿತ್ ತಾಂಡೇಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News