ಮುಳುಗಡೆ ಸಂತ್ರಸ್ತರ ಭೂಮಿ ಕಬಳಿಕೆಗೆ ಯತ್ನ
ಶಿವಮೊಗ್ಗ, ಜೂ.21: ಜಿಲ್ಲೆಯ ಹೊಸನಗರ ತಾಲೂಕಿನ ಚಕ್ರಾ ಸಾವೆಹಕ್ಲು ಜಲ ವಿದ್ಯುತ್ ಯೋಜನೆ ಮುಳುಗಡೆ ಸಂತ್ರಸ್ತರಿಗೆ ಶಿವಮೊಗ್ಗ ತಾಲೂಕಿನ ಅಗಸವಳ್ಳಿ ಗ್ರಾಮದ ಹಾಯ್‌ಹೊಳೆಯಲ್ಲಿ ಮೀಸಲಿಡಲಾಗಿದ್ದ ಭೂಮಿಯನ್ನು ಬಲಾಢ್ಯ ಸಮಾಜದ ಸಂಘಟನೆ ಹಾಗೂ ವ್ಯಕ್ತಿಗಳು ಕಬಳಿಸುತ್ತಿವೆ ಎಂದು ಆರೋಪಿಸಿ ಚಕ್ರಾ-ಸಾವೆಹಕ್ಲು ಮುಳುಗಡೆ ಸಂತ್ರಸ್ತ ಪುನರ್ವಸತಿ ಹೋರಾಟ ಸಮಿ ತಿಯು ಮಂಗಳವಾರ ನಗರದ ಡಿ.ಸಿ. ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಪತ್ರ ಅರ್ಪಿಸಿತು. ಮುಳುಗಡೆ ಸಂತ್ರಸ್ತರಿಗೆ ಅಗಸವಳ್ಳಿ ಗ್ರಾಮದ ಸರ್ವೇ ನಂಬರ್ 167 ರ ಹಾಯ್ ಹೊಳೆಯಲ್ಲಿ 1,000 ಎಕರೆ ಪ್ರದೇಶವನ್ನು ಕರ್ನಾಟಕ ವಿದ್ಯುತ್ ನಿಗಮ ಮಂಜೂರು ಮಾಡಿತ್ತು. ಭೂಮಿ ಸಮತಟ್ಟುಗೊಳಿಸಿ ಸಂತ್ರಸ್ತಗೊಂಡ 266 ಕುಟುಂಬಗಳಿಗೆ ಹಂಚಿಕೆ ಮಾಡಲು ನಿರ್ಧರಿಸಿತ್ತುಈ ಪೈಕಿ 136 ಕುಟುಂಬಗಳಿಗೆ 429 ಎಕರೆ ಪ್ರದೇಶವನ್ನು ನಿಯಾಮಾನುಸಾರ ಕೆ.ಪಿ.ಸಿ.ಯವರು ಹಂಚಿಕೆ ಮಾಡಿದ್ದಾರೆ. ಅಂದೇ ಪೋಡಿ ಶುಲ್ಕ, ನೆಲದ ಕಿಮ್ಮತ್ತನ್ನು ತಾಲೂಕು ಆಡಳಿತಕ್ಕೆ ಪಾವತಿಸಿದ್ದರು. ಆದರೆ ಇಲ್ಲಿಯವರೆಗೂ ತಾಲೂಕು ಆಡಳಿತವು ಪೋಡಿ ಪ್ರಕ್ರಿಯೆ ಆರಂಭಿಸಿಲ್ಲ. ಸಂತ್ರಸ್ತರು ಹಲವು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಈ ನಡುವೆ ಕೆ.ಪಿ.ಸಿ.ಯವರು ಜಮೀನು ಮತ್ತು ನಿವೇಶನ ಹಂಚಿಕೆ ಜವಾಬ್ದಾರಿಯನ್ನು ತಾಲೂಕು ಆಡಳಿತಕ್ಕೆ ಹಸ್ತಾಂತರಿಸಿದ್ದಾರೆ. ಸಂತ್ರಸ್ತರಿಗೆ ಮೀಸಲಿಟ್ಟ ಭೂಮಿಯಲ್ಲಿ 25 ಎಕರೆ ವಿಸ್ತೀರ್ಣವನ್ನು ಜಾತಿಯೊಂದರ ಸಂಘಟನೆಗೆ ಲೀಸ್ ಆಧಾರದ ಮೇಲೆ ನೀಡಲಾಗಿದೆ. ಈ ನಡುವೆ ಸಂತ್ರಸ್ತರು ಉಳುಮೆ ಮಾಡುತ್ತಿದ್ದ ಕೃಷಿ ಜಮೀನನ್ನು ಒತ್ತುವರಿ ಮಾಡಿ ಬೇಲಿ ಹಾಕಲಾಗುತ್ತಿದೆ. ಇದನ್ನು ಪ್ರಶ್ನಿಸುವ ಸಂತ್ರಸ್ತರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ. ಅಧಿಕಾರಿಗಳು ಕೂಡ ಇವರೊಂದಿಗೆ ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಇದು ನಿಜಕ್ಕೂ ಖಂಡನೀಯವಾದುದಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಜಾತಿ ಸಂಘಟನೆಗಳಿಗೆ ಲೀಸ್ ಆಧಾರದ ಮೇಲೆ ಜಾಗ ನೀಡಲು ತಮ್ಮ ಅಭ್ಯಂತರವಿಲ್ಲ. ಆದರೆ 25 ವರ್ಷಗಳಿಂದ ಸಂತ್ರಸ್ತರು ಉಳುಮೆ ಮಾಡಿಕೊಂಡು ಬರುತ್ತಿರುವ ಜಮೀನುಗಳನ್ನು ಕಬಳಿಸಲು ಯತ್ನಿಸುತ್ತಿರುವುದು ಹಾಗೆಯೇ ಸಂತ್ರಸ್ತರಿಗೆ ಬೆದರಿಕೆ ಹಾಕುತ್ತಿರುವುದು ಆಡಳಿತ ವ್ಯವಸ್ಥೆಯ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಜಿಲ್ಲಾಡಳಿತವು ಸಂತ್ರಸ್ತರ ನೆರವಿಗೆ ಧಾವಿಸಬೇಕು. ಸಂತ್ರಸ್ತರ ಜಮೀನು ಒತ್ತುವರಿ ಮಾಡಿಕೊಂಡವರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು. ಸೂಕ್ತ ಭದ್ರತೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಬಾ ಕ್ಷೇತ್ರದ ಶಾಸಕಿ ಶಾರದಾ ಪೂರ್ಯನಾಯ್ಕಾ, ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಗೌಡ, ಮಾಜಿ ಶಾಸಕ ಸ್ವಾಮಿರಾವ್, ಜಿಪಂ ಸದಸ್ಯ ಸುರೇಶ್ ಸ್ವಾಮಿರಾವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.