ತೀರ್ಥಹಳ್ಳಿ: ತಾಲೂಕಿನಾದ್ಯಂತ ಉತ್ತಮ ಮಳೆ
Update: 2016-06-21 23:24 IST
ತೀರ್ಥಹಳ್ಳಿ, ಜೂ.21: ತಾಲೂಕಿನಾದ್ಯಂತ ಕಳೆದ 10 ದಿನಗಳಿಂದ ವರುಣನ ಅವಕೃಪೆಗೆ ಒಳಗಾಗಿ ಆತಂಕಕ್ಕೊಳಗಾಗಿದ್ದ ಮಲೆನಾಡಿಗರಿಗೆ ಕಳೆದ 24 ಗಂಟೆಗಳಲ್ಲಿ ಉತ್ತಮ ಮಳೆಯಾಗಿದೆ.
ಆರಿದ್ರಾ ಮಳೆಯು ತಾಲೂಕಿನ ಮಂಡಗದ್ದೆ, ಕೋಣಂದೂರು, ಅಗ್ರಹಾರ, ಮುತ್ತೂರು ಹೋಬಳಿ ಹಾಗೂ ತೀರ್ಥಹಳ್ಳಿ ಪಟ್ಟಣದಲ್ಲಿ ನಿನ್ನೆ ಸಂಜೆ ಆರಂಭವಾಗಿ ಬೆಳಗಿನತನಕವೂ ಗುಡುಗು ಸಿಡಿಲುರಹಿತ ಮಳೆಯಾಗಿದೆ. ತಾಲೂಕಿನ ಹಲವೆಡೆ ಕುಡಿಯುವ ನೀರಿನ ಸಮಸ್ಯೆಯು ಕಂಡುಬಂದಿತ್ತು. ಇಲ್ಲಿನ ಪ್ರಮುಖ ನದಿಗಳಾದ ತುಂಗೆ ಹಾಗೂ ಮಾಲತಿಯಲ್ಲಿ ಹರಿವು ಕ್ಷೀಣವಾಗಿ ಮಲೆನಾಡಿಗರಲ್ಲಿ ಆತಂಕ ಸೃಷ್ಟಿ ಮಾಡಿತ್ತು. ಆದರೆ, ಮೃಗಶಿರ ಮಳೆ ಕೈಕೊಟ್ಟು ಆರಿದ್ರ ಮಳೆ ಮಲೆನಾಡಿಗರ ಕೈ ಹಿಡಿದಿದೆ ಎಂದು ಹಿರಿಯ ಕೃಷಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ 24 ಗಂಟೆಗಳಲ್ಲಿ ತೀರ್ಥಹಳ್ಳಿಯಲ್ಲಿ 42.02 ಮಿ.ಮೀ. ಮಳೆಯಾಗಿದ್ದು, ಆಗುಂಬೆಯಲ್ಲಿ 102 ಮಿ.ಮೀ. ಮಳೆಯಾಗಿದೆ ಎಂದು ಇಲಾಖೆಯವರು ತಿಳಿಸಿದ್ದಾರೆ.