ಬೆಳೆವಿಮೆ ವಿತರಣೆಯಲ್ಲಿ ವಿಳಂಬ
ಸಾಗರ, ಜೂ.21: ರೈತ ಹುತಾತ್ಮ ದಿನಾಚರಣೆ ಅಂಗವಾಗಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ವತಿಯಿಂದ ಬೆಳೆವಿಮೆ ಮೊತ್ತ ವಿಳಂಬವಾಗಿ ವಿತರಣೆ ಮಾಡುತ್ತಿರುವುದನ್ನು ಸರಿಪಡಿಸುವಂತೆ ಒತ್ತಾಯಿಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಕೆ.ಮಂಜುನಾಥ ಗೌಡ ಮಾತನಾಡಿ, ರಾಜ್ಯ ಸರಕಾರಕ್ಕೆ ರೈತರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ಕಳೆದ 10 ವರ್ಷಗಳಿಂದ ರೈತರು ಬೆಳೆವಿಮೆ ಮೊತ್ತವನ್ನು ಪಾವತಿ ಮಾಡುತ್ತಿದ್ದಾರೆ. ಆದರೆ ಸೊರಬ ತಾಲೂಕಿನಲ್ಲಿ ಕಳೆದ ಸಾಲಿನಲ್ಲಿ ಉಂಟಾದ ಬರಗಾಲದಿಂದ ರೈತರು ಪೂರ್ಣ ಬೆಳೆ ಕಳೆದುಕೊಂಡಿದ್ದಾರೆ. ಈತನಕ ಬೆಳೆವಿಮಾ ಮೊತ್ತ ಪಾವತಿ ಮಾಡಿಲ್ಲ ಎಂದು ದೂರಿದರು. ಸರಕಾರಕ್ಕೆ ರೈತರು ಬೆಳೆವಿಮೆ ಮೊತ್ತ ಪಾವತಿ ಮಾಡಿ ಎಂದು ಕೇಳುವ ನೈತಿಕ ಹಕ್ಕಿಲ್ಲ. ಸರಕಾರ ವಿಮಾ ಕಂಪೆನಿಗಳನ್ನು ರಕ್ಷಣೆ ಮಾಡುವುದನ್ನು ಬಿಟ್ಟು ರೈತರ ರಕ್ಷಣೆಗೆ ಮುಂದಾಗಬೇಕು. ಇದುವರೆಗೆ ಸೊರಬ ತಾಲೂಕಿನ ರೈತರಿಗೆ ವಿಮಾ ಮೊತ್ತ ಪಾವತಿ ಮಾಡಿಲ್ಲ. ಜಿಲ್ಲಾಧಿಕಾರಿಗಳಿಗೆ, ಕೃಷಿ ಆಯುಕ್ತರಿಗೆ ಈ ಬಗ್ಗೆ ಮನವಿ ಮಾಡಿದ್ದು, ಮುಂದಿನ 15 ದಿನಗಳಲ್ಲಿ ವಿಮಾ ಮೊತ್ತ ಕೊಡುತ್ತೇವೆ ಎಂದು ನೀಡಿರುವ ಭರವಸೆ ಹುಸಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬರಗಾಲ ಘೋಷಣೆಯಾದ ಸಂದರ್ಭ ಬೆಳೆ ಕಟಾವು ಆಧಾರವನ್ನು ಸಂಪೂರ್ಣ ಹೊರತುಪಡಿಸಿ ಬೆಳೆವಿಮೆ ವಿತರಿಸುವಲ್ಲಿ ಉದ್ದೇಶಪೂರ್ವಕ ವಿಳಂಬನೀತಿಯನ್ನು ತಕ್ಷಣ ತಡೆಹಿಡಿಯಬೇಕು. ಫಸಲು ಕಟಾವಾದ ಒಂದು ತಿಂಗಳ ಒಳಗೆ ವಿಮಾ ಮೊಬಲಗು ಪಾವತಿ ಮಾಡಬೇಕು. ವಿಳಂಬವಾದಲ್ಲಿ ಶೇ.12 ಹಣ ಸೇರಿಸಿಕೊಡಬೇಕು. ಹಾಲಿ ಬೆಳೆ ವಿಮಾ ಕಂತು ಕಟ್ಟುವ ಸಮಯ ಮುಗಿಯುತ್ತಾ ಬಂದರೂ ಕಳೆದ ವರ್ಷದ ವಿಮಾ ಮೊತ್ತ ರೈತರಿಗೆ ನೀಡದೆ ಇರುವುದು ಖಂಡನೀಯ. ಇದರಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ. ವೈಜ್ಞಾನಿಕ ಬೆಲೆ ಬರುವವರೆಗೂ ಸರಕಾರವೆ ವಿಮಾ ಕಂತು ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು, ರೈತ ಸಂಘದ ಆನಂದ ಡಿ.ನಾಯ್ಕ, ಈಶ್ವರಪ್ಪ ಕೊಡಕಣಿ, ಶಿವಮೂರ್ತಪ್ಪ, ಮಂಜಪ್ಪ ಜಾಬಳಿ, ಬಾಲಚಂದ್ರಗೌಡ, ನಾಗರಾಜ, ಫಕೀರಸ್ವಾಮಿ, ಶಿವಣ್ಣ ಇನ್ನಿತರರು ಉಪಸ್ಥಿತರಿದ್ದರು.