ಯೋಗದಿಂದ ಉತ್ತಮ ಆರೋಗ್ಯ: ಡಾ.ಯೋಗೀಶ್
ಮೂಡಿಗೆರೆ, ಜೂ.21: ಇಂದಿನ ಇಲೆಕ್ಟ್ರಾನಿಕ್ ಮತ್ತು ಮೊಬೈಲ್ ಯುಗದಲ್ಲಿ ಆರೋಗ್ಯದತ್ತ ಗಮನಹರಿಸದೆ ಇರುವುದರಿಂದ ಹೃದಯಾಘಾತ, ಮಧುಮೇಹದಂತ ಮಾರಕ ಕಾಯಿಲೆಗೆ ತುತ್ತಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಯೋಗೀಶ್ ಅಭಿಪ್ರಾಯಿಸಿದರು.
ಪಟ್ಟಣದ ರಾಯಲ್ ಮಲ್ಟಿಜಿಮ್‌ನಲ್ಲಿ ವಿಶ್ವ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಯೋಗ ಬರೀ ದಿನಾಚರಣೆಗೆ ಸೀಮಿತವಾಗದೆ ಪ್ರತಿಯೊಬ್ಬರು ದಿನಂಪ್ರತಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಪ್ರತಿಯೊಬ್ಬರ ದೇಹ ಮತ್ತು ಮನಸ್ಸುಗಳನ್ನು ನಿಯಂತ್ರಿಸಿ ಆರೋಗ್ಯ ಪಡೆಯುವ ಮೂಲಕ ಎಲ್ಲಾ ರೀತಿಯ ಒತ್ತಡ ಮತ್ತು ಉದ್ವೇಗಗಳನ್ನು ನಿಯಂತ್ರಿಸಲು ಯೋಗ ಸಹಕಾರಿಯಾಗಿದೆ ಎಂದರು.
ಜೇಸಿ ಸಂಸ್ಥೆಯ ಮಾಜಿ ಅಧ್ಯಕ್ಷ ಟಿ.ಹರೀಶ್ ಮಾತನಾಡಿ, ವಿದ್ಯಾರ್ಥಿಗಳು ಗ್ಯಾಜೇಟ್ ಗೀಳಿನಿಂದ ಏಕಾಗ್ರತೆಯನ್ನು ಕಳೆದುಕೊಂಡು ಭವಿಷ್ಯದ ಗುರಿ ಮುಟ್ಟಲು ಸಾಧ್ಯವಾಗದ ಪರಿಸ್ಥಿತಿ ತಲುಪಿದ್ದಾರೆ.ಪೋಷಕರು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವುದರೊಂದಿಗೆ ಯೋಗದಲ್ಲಿ ವಿದ್ಯಾರ್ಥಿಗಳೊಂದಿಗೆ ತಾವು ಯೋಗಭ್ಯಾಸದಲ್ಲಿ ಪಾಲ್ಗೊಂಡಲ್ಲಿ ವಿದ್ಯಾರ್ಥಿ ಜೀವನ ಸುಖಕರವಾಗುವುದು ಎಂದರು.
ಪಪಂ ಸದಸ್ಯ ರಾಮಕೃಷ್ಣಶೆಟ್ಟಿ, ರಾಯಲ್ ಮಲ್ಟಿ ಜಿಮ್‌ನ ಮಾಲಕ ಅಲ್ತಾಫ್ ಹುಸೈನ್, ಹಾ.ಬ.ನಾಗೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ಪತ್ರಕರ್ತ ವಾಸುದೇವ್ ಆಚಾರ್, ಅಕ್ಷಯ್, ಅಣ್ಣಯ್ಯ, ವಾಸು, ಪ್ರವೀಣ್, ರಘು ಮತ್ತಿತರರು ಉಪಸ್ಥಿತರಿದ್ದರು.