ಶ್ರೀಗಂಧದ ಮರ ಕಡಿದ ಅಪರಾಧಿಗೆ ಶಿಕ್ಷೆ
ಚಿಕ್ಕಮಗಳೂರು, ಜೂ.21: ಅಕ್ರಮವಾಗಿ ಶ್ರೀಗಂಧದ ಮರಗಳನ್ನು ಕಡಿದ ಆರೋಪಿಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ನಗರದ 2ನೆ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆ.
ಲಿಂಗದಹಳ್ಳಿ ಶಾಖಾ ಉಪವಲಯ ಅರಣ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿ 2014ರ ಅಕ್ಟೋಬರ್ 16ರಂದು ಗಸ್ತು ಕಾರ್ಯನಿರ್ವಹಿಸುತ್ತಿದ್ದರು. ಅಂದು ಸಂಜೆ ವೇಳೆ ತರೀಕೆರೆ ತಾಲೂಕು, ಲಿಂಗದ ಹಳ್ಳಿ ಹೋಬಳಿ ಗಂಗೂರು ಮೀಸಲು ಅರಣ್ಯದ ಈಚಲು ಕಟ್ಟೆಯಲ್ಲಿ ಆರೋಪಿಗಳಾದ ಜಯಮೂರ್ತಿ(40) ಮತ್ತು ವೆಂಕಟೇಶ(30) ಎಂಬವರು ಅಕ್ರಮವಾಗಿ ಅರಣ್ಯ ಪ್ರವೇಶಿಸಿದ್ದರು. ಅಲ್ಲದೇ ಬೆಲೆಬಾಳುವ ಶ್ರೀಗಂಧದ ಮರಗಳನ್ನು ಕಡಿದು ಕೆತ್ತನೆ ಮಾಡುತ್ತಿದ್ದಾಗ ಆರೋಪಿಗಳು ಸೆರೆಯಾಗಿದ್ದರು.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ಹಾಗೂ 1,63,500 ಸಾವಿರ ವೌಲ್ಯದ 19 ಶ್ರೀಗಂಧದ ತುಂಡುಗಳು ಮತ್ತು ಚಕ್ಕೆಗಳನ್ನು ವಶಪಡಿಸಿಕೊಂಡು ತರೀಕೆರೆ ವಲಯ ಅರಣ್ಯಾಧಿಕಾರಿಗಳು ಆರೋಪಿಗಳ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ ಕಲಂ 50,62,84,86 ಅನ್ವಯ ಪ್ರಕರಣವನ್ನು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 2ನೆ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಡಿ.ಕಂಬೇಗೌಡ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಾದ ಜಯಮೂರ್ತಿ ಮತ್ತು ವೆಂಕಟೇಶನಿಗೆ ಕರ್ನಾಟಕ ಅರಣ್ಯ ಕಾಯ್ದೆ 50,62,84,86 ಅನ್ವಯ ಅಪರಾಧಕ್ಕೆ 5 ವರ್ಷ ಜೈಲು ಶಿಕ್ಷೆ ಹಾಗೂ ರೂ. ತಲಾ ರೂ. 50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಎ.ಎಂ. ಸುರೇಶ್‌ಕುಮಾರ್ ಮೊಕದ್ದಮೆಯನ್ನು ನಡೆಸಿದ್ದರು.