ಮುದ್ರಣ ಕಲೆ ಆಧಾರಿತ ಕಲಾಕೃತಿಗಳ ರಚನೆ ಇಂದು ವಿರಳ

Update: 2016-06-21 18:03 GMT

ಚಿಕ್ಕಮಗಳೂರು, ಜೂ.21: ಮುದ್ರಣ ಕಲೆ ಆಧಾರಿತ ಕಲಾಕೃತಿಗಳ ರಚನೆ ಇತ್ತೀಚಿನ ದಿನಗಳಲ್ಲಿ ವಿರಳವಾಗಿದೆ. ಇಂತಹ ಅಪರೂಪದ ಕಲಾಕೃತಿಗಳ ರಚನೆಯಲ್ಲಿ ತೊಡಗಿರುವ ಯುವ ಕಲಾವಿದ ಕೆ.ಸಿ.ಕಿರಣ್ ಅವರ ಕಾರ್ಯ ಶ್ಲಾಘನೀಯ ಎಂದು ಹಿರಿಯ ಕಲಾವಿದೆ ಹಾಗೂ ನಾಟಕ ಅಕಾಡಮಿ ಸದಸ್ಯೆ ಕಲ್ಪನಾ ನಾಗಾನಾಥ್ ತಿಳಿಸಿದರು.

ನಗರದ ಶಾಂತಿನಿಕೇತನ ಆರ್ಟ್ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಆಯೋಜಿಸಲಾಗಿರುವ 6 ದಿನಗಳ ಕಾಲ ಕಲಾವಿದ ಕಿರಣ್ ರವರ ಕೈಚಳಕದಲ್ಲಿ ಒಡಮೂಡಿದ ಕಲಾಕೃತಿಗಳ ಪ್ರದರ್ಶನ ವಾಸ್ತವ್ ಅನ್ನು ಉದ್ಘಾಟಿಸಿ ಮಾತನಾಡಿದರು.

ಆಧುನಿಕ ದಿನಮಾನಗಳಲ್ಲಿ ಮುದ್ರಣ ಮಾಧ್ಯಮ ತನ್ನನ್ನು ಕ್ರಾಂತಿಕಾರಕ ಬದಲಾವಣೆಗಳಿಗೆ ತೆರೆದುಕೊಂಡಿದ್ದರೂ ಪುರಾತನ ತಂತಜ್ಞ್ಞಾನವನ್ನು ರೂಢಿಸಿಕೊಂಡು ಆ ಮೂಲಕ ತನ್ನ ಕಲ್ಪನೆಗಳನ್ನು ಒಡಮೂಡಿಸಿ ನೋಡುಗನನ್ನು ಚಿಂತನೆಗೆ ಹಚ್ಚುವ ಕಲಾವಿದನ ಪ್ರಯತ್ನ ಅನನ್ಯ ಎಂದರು. ಶಾಂತಿನಿಕೇತನ ಪ್ರಾಚಾರ್ಯ ವಿಶ್ವಕರ್ಮ ಆಚಾರ್ಯ ಮಾತನಾಡಿ, ಚಿಕ್ಕಮಗಳೂರಿನ ಇತಿಹಾಸದಲ್ಲಿಯೇ ಮುದ್ರಣ ಕಲೆ ಆಧಾರಿತ ಕಲಾಕೃತಿಗಳ ಪ್ರದರ್ಶನ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದು,್ದ ಈ ಪ್ರದರ್ಶನದಿಂದ ಕುಂಚಕಲೆಯ ವಿದ್ಯಾರ್ಥಿಗಳನ್ನು ಇನ್ನಷ್ಟು ತಮ್ಮನ್ನು ತೊಡಗಿಸಿಕೊಳ್ಳಲು ಪ್ರೇರಣೆಯಾಗಿದೆ ಎಂದರು.

ಕಲಾವಿದರ ಸೃಜನಶೀಲತೆಗೆ ಆಸರೆಯಾಗಿರುವ ರುದ್ರ ರಮಣೀಯ ಪ್ರಕೃತಿ ತಾಣವಾಗಿರುವುದು ಚಿಕ್ಕಮಗಳೂರು. ಆದರೆ ಇಲ್ಲಿ ಕಲಾವಿದರ ಕೊರತೆ ಇರುವಿಕೆಯೇ ಹೆಚ್ಚು. ಅದರಲ್ಲೂ ಚಿತ್ರ, ಶಿಲ್ಪ, ಮುದ್ರಣ ಕಲೆ ಹಾಗೂ ಇತ್ತೀಚಿನ ದಿನಗಳಲ್ಲಿ ಪ್ರಚಲಿತವಿರುವ ಡಿಜಿಟಲ್ ಫೋಟೊಗ್ರಫಿಯಂತಹ ಕಲಾಕೃತಿಗಳು ಅಪರೂಪ ಎನಿಸಿದೆ. ಮೂಲತಃ ಕಡೂರಿನ ಜಿ.ತಿಮ್ಮಾಪುರದ ಚಂದ್ರಶೇಖರ್ ಹಾಗೂ ಗಿರಿಜಾ ದಂಪತಿಯ ಮಗನಾದ ಯುವ ಕಲಾವಿದ ಕಿರಣ್.ಟಿ.ಸಿ ನಗರದ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಚಿತ್ರಕಲೆಯಲ್ಲಿ ಪದವಿಯನ್ನು ನಂತರ ಬೆಂಗಳೂರು ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ಮುದ್ರಣ ಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಕಲಾಕೃತಿಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

   ಅತಿ ವಿರಳ ಎನಿಸಿರುವ ಮುದ್ರಣ ಕಲೆಯ ವಿವಿಧ ಮಾಧ್ಯಮಗಳಾದ ಲಿನೋಕಟ್, ವುಡ್‌ಕಟ್, ಲಿಥೋಗ್ರಫಿ, ಎಚ್ಚಿಂಗ್, ಮೆಜೋಟಿಂಟ್, ಡ್ರೈ ಪಾಯಿಂಟ್, ಸೆರಿಗ್ರಫಿ, ಇಂಟಾಗ್ಲೋ, ಡಿಜಿಟಲ್ ಫೋಟೊಗ್ರಫಿ ವಿಧಾನದಲ್ಲಿ ಪೋಟ್ರೇಟ್, ಕೊಲಾಜ್, ಅನ್‌ಟೈಟಲ್ಡ್ ಕಲಾಕೃತಿಗಳೊಂದಿಗೆ ಚಿತ್ರಕೃತಿಗಳು ಹಾಗೂ ಡಿಜಿಟಲ್ ಪೋಟೋಗ್ರಫಿ ಕಲಾಕೃತಿಗಳು ವಾಸ್ತವ್ ಎಂಬ ಮುಖ್ಯ ಶೀರ್ಷಿಕೆಯಡಿ ನೋಡುಗರ ಮನಸೂರೆಗೊಳ್ಳುತ್ತಿದೆ. ಜೂ.26 ರವರೆಗೆ ಬೆಳಗ್ಗೆ 11:30ರಿಂದ 4 ಗಂಟೆಯ ವರೆಗೆ ಪ್ರದರ್ಶನಗೊಳ್ಳುತ್ತಿದೆ. ಕಲಾಸಕ್ತರು ಕಲಾಕೃತಿಯನ್ನು ನೋಡಲು ಹಾಗೂ ಅರ್ಥ ಮಾಡಿಕೊಳ್ಳಲು ಇದೊಂದು ಸದಾವಕಾಶವಾಗಿದೆ.

ವೇದಿಕೆಯಲ್ಲಿ ಕಲಾವಿದ ಕಿರಣ್, ನಟನಾರಂಗದ ಕಲಾವಿದ ವಿನೀತ್ ಕುಮಾರ್, ಕಲಾವಿದ ಹಾಗೂ ರಂಗಕರ್ಮಿ ಜಗದೀಶ್ ಆರ್ ಜಾಣಿ, ಆದಿವಾಸಿ ರಕ್ಷಣಾ ಪರಿಷತ್ತಿನ ಜಿಲ್ಲಾಧ್ಯಕ್ಷ ಪಿ.ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News