ಮೂಡಿಗೆರೆ ಎಂಜಿಎಂ ಆಸ್ಪತ್ರೆ ಆವರಣದಲ್ಲಿ ಶ್ರಮದಾನ

Update: 2016-06-21 18:04 GMT

ಮೂಡಿಗೆರೆ, ಜೂ.21: ಇಲ್ಲಿನ ಎಂಜಿಎಂ ಸರಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬೆಳೆದಿದ್ದ ಪೊದೆಯನ್ನು ಆಸ್ಪತ್ರೆಯ ವೈದ್ಯಾಧಿಕಾರಿಗಳ ಸಹಿತ ಸಿಬ್ಬಂದಿ ಹಾಗೂ ಸಮಾಜ ಸೇವಕರು ಜತೆಗೂಡಿ ಕತ್ತರಿಸಿ ತೆರವುಗೊಳಿಸಿದರು.

ಆಸ್ಪತ್ರೆಯ ಕಾಂಪೌಂಡ್ ಒಳಗಿನ ಪ್ರದೇಶದ ಶವಾಗಾರದ ಬಳಿ ಹಾಗೂ ಆಸ್ಪತ್ರೆಯ ಹಿಂಭಾಗದಲ್ಲಿ ಬೃಹತ್ ಪೊದೆಯು ಬೆಳೆದು ಸಾರ್ವಜನಿಕರ ನಡೆದಾಡಲು ಸಮಸ್ಯೆಯುಂಟು ಮಾಡಿತ್ತು. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ತೀವ್ರ ತೊಂದರೆ ಉಂಟಾಗುತ್ತಿತ್ತು. ಇದನ್ನು ಮನಗಂಡ ಸಮಾಜ ಸೇವಕ ತಂಡವಾದ ಫಿಶ ಮೋಣು, ಅಬ್ದುಲ್ ರೆಹಮಾನ್ ಶ್ರಮದಾನದ ಮೂಲಕ ಪೊದೆ ತೆರವುಗೊಳಿಸಿದರು.

 ಶ್ರಮಾಧಾನ ನಡೆಸುತ್ತಿರುವವರನ್ನು ಗಮನಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ಯೋಗೇಶ್, ಡಾ.ಸುಂದರೇಶ್ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ತಾವೂ ಶ್ರಮದಾನದಲ್ಲಿ ಭಾಗಿಗಳಾದರು. ಬೆಳಗಿನಿಂದ ಸಂಜೆ 3 ಗಂಟೆವರೆಗೂ ಶ್ರಮಾದಾನ ನಡೆಸಿ, ಆಸ್ಪತ್ರೆಯ ಆವರಣದಲ್ಲಿ ಬೆಳೆದಿದ್ದ ಎಲ್ಲಾ ಪೊದೆಗಳನ್ನು ಸಂಪೂರ್ಣ ತೆರವು ಮಾಡಿದರು.

ಈ ಸಂದರ್ಭದಲ್ಲಿ ಡಾ.ಸುನೀಲ್, ಸಿಬ್ಬಂದಿಯಾದ ಚಿತ್ರಾ, ಪ್ರೇಮಾ, ವನೀತಾ, ಮಧು, ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News