ಜಿಲ್ಲೆಯಾದ್ಯಂತ ಚುರುಕುಗೊಂಡ ಮಳೆ

Update: 2016-06-21 18:06 GMT

ಶಿವಮೊಗ್ಗ, ಜೂ. 21: ಕಳೆದ ಹಲವು ದಿನಗಳಿಂದ ಮಲೆನಾಡಿನಲ್ಲಿ ದುರ್ಬಲಗೊಂಡಿದ್ದ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದೆ. ಕಳೆದ 24 ಗಂಟೆಗಳಿಂದ ಜಿಲ್ಲೆಯಾದ್ಯಂತ ಮಳೆ ಬೀಳಲಾರಂಭಿಸಿದೆ. ಕೆಲವೆಡೆ ಧಾರಾಕಾರ ಮಳೆಯಾಗುತ್ತಿದ್ದರೆ, ಉಳಿದೆಡೆ ಸಾಧಾರಣ ವರ್ಷಧಾರೆಯಾಗುತ್ತಿದೆ. ಮಳೆಯ ಪುನಾರಾಗಮನವು ಆತಂಕದಲ್ಲಿದ್ದ ರೈತರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಬುಧವಾರ ಕೂಡ ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದೆ. ಶಿವಮೊಗ್ಗ ನಗರದಲ್ಲಿ ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗುತ್ತಿದೆ. ಆಗಾಗ್ಗೆ ಧಾರಾಕಾರ ವರ್ಷಧಾರೆಯಾಗುತ್ತಿದೆ. ತಾಪಮಾನದ ಪ್ರಮಾಣ ಕಡಿಮೆಯಾಗಿದೆ. ಮುಂಗಾರು ಮತ್ತೆ ಚುರುಕು: ಜೂನ್ ಮೊದಲ ವಾರದಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುವ ಮೂಲಕ ಹೊಸ ನಿರೀಕ್ಷೆ ಮೂಡಿಸಿತ್ತು. ಕೃಷಿ ಚಟುವಟಿಕೆಗಳಿಗೆ ಕೂಡ ಚಾಲನೆ ಸಿಕ್ಕಿತ್ತು. ಆದರೆ ನೈರುತ್ಯ ಮಾನ್ಸೂನ್ ಮಾರುತಗಳು ದುರ್ಬಲಗೊಂಡಿದ್ದ ಪರಿಣಾಮ ಮಳೆಯ ಪ್ರಮಾಣ ಸಂಪೂರ್ಣವಾಗಿ ಕಡಿಮೆಯಾಗಿತ್ತು. ಈ ವಾತಾವರಣ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವಂತಾಗಿತ್ತು. ಮಳೆಗಾಗಿ ರೈತರು ಕಾದು ಕುಳಿತುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆತಂಕದ ಕರಿಛಾಯೆ ಆವರಿಸಿತ್ತು. ಇದೀಗ ಮತ್ತೆ ಜಿಲ್ಲೆಯಾದ್ಯಂತ ಮುಂಗಾರು ಮಳೆ ಚುರುಕುಗೊಂಡಿರುವುದು ರೈತರಲ್ಲಿ ಸಂತಸವುಂಟು ಮಾಡಿದೆ. ಇದೇ ರೀತಿ ಮಳೆ ಮುಂದುವರಿದರೆ ಭತ್ತದ ಬೀಜ ಬಿತ್ತನೆ ಹಾಗೂ ನಾಟಿ ಕಾರ್ಯ ವೇಗ ಪಡೆದುಕೊಳ್ಳಲಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ನಡುವೆ ಹವಾಮಾನ ಇಲಾಖೆಯ ಮೂಲಗಳು ಮುಂದಿನ ದಿನಗಳಲ್ಲಿ ಜಿಲ್ಲೆಯ ಪಶ್ಚಿಮಘಟ್ಟ ಪ್ರದೇಶಗಳು ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದು, ಈ ಬಾರಿಯಾದರೂ ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿ ಬೀಳಲಿದೆಯಾ? ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.

ಮಳೆಯ ವಿವರ: ತೀರ್ಥಹಳ್ಳಿ 42 ಮಿ.ಮೀ.

ಶಿವಮೊಗ್ಗದಲ್ಲಿ 0.6 ಮಿ.ಮೀ.

ಭದ್ರಾವತಿಯಲ್ಲಿ 9.6 ಮಿ.ಮೀ. ಸಾಗರದಲ್ಲಿ 21 ಮಿ.ಮೀ.

ಶಿಕಾರಿಪುರದಲ್ಲಿ 12.2 ಮಿ.ಮೀ.

ಸೊರಬದಲ್ಲಿ 4.5 ಮಿ.ಮೀ. ಹೊಸನಗರ 4 ಮಿ.ಮೀ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News