ವನ ಮಹೋತ್ಸವ ಅಭಿಯಾನಕ್ಕೆ ಕೈಜೋಡಿಸಿ: ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ
ಮಡಿಕೇರಿ, ಜೂ.21: ವಿವಿಧ ಇಲಾಖೆಗಳ ಸಹಯೋಗ ದೊಂದಿಗೆ ಅರಣ್ಯ ಇಲಾಖೆಯ ವತಿಯಿಂದ ಜು.2 ರಿಂದ ಒಂದು ವಾರಗಳ ಕಾಲ ವನಮಹೋತ್ಸವ ಅಭಿಯಾನವನ್ನು ಹಮ್ಮಿಕೊಳ್ಳಲು ಉದ್ದೇಶಿಸಿದ್ದು, ಅಧಿಕಾರಿಗಳು ಕೈಜೋಡಿಸುವಂತೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಕರೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಾಲೆ, ಕಾಲೇಜು, ಅಂಗನವಾಡಿ, ವಿದ್ಯಾರ್ಥಿ ನಿಲಯ, ವಿವಿಧ ಇಲಾಖಾ ವ್ಯಾಪ್ತಿಗಳಿಗೆ ಒಳಪಡುವ ಸರಕಾರಿ ಸ್ಥಳಗಳಲ್ಲಿ, ಜಿಲ್ಲಾ ಪಂಚಾಯತ್ ಮತ್ತು ಲೋಕೋಪಯೋಗಿ ರಸ್ತೆಗಳಲ್ಲಿ ಜಿಲ್ಲೆಯಲ್ಲಿ ಬೇಡಿಕೆ ಇರುವ ಗಿಡಗಳನ್ನು ನೆಡಲು ಮುಂದಾಗಬೇಕು ಎಂದರು.
ಇಲಾಖಾ ವ್ಯಾಪ್ತಿಯಲ್ಲಿ ಗಿಡಗಳಿಗೆ ಬೇಡಿಕೆ ಸಂಬಂಧ ಪ್ರಸ್ತಾವನೆಯನ್ನು ಸಾಮಾಜಿಕ ಅರಣ್ಯ ಇಲಾಖೆಗೆ ಸಲ್ಲಿಸಬೇಕು. ಸಾಮಾಜಿಕ ಅರಣ್ಯ ಹಾಗೂ ತೋಟಗಾರಿಕಾ ಇಲಾಖಾ ವ್ಯಾಪ್ತಿಯಲ್ಲಿ ಲಭ್ಯವಿರುವ ಗಿಡಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಜಿ.ಪಂ.ಸಿಇಒ ಚಾರುಲತಾ ಸೋಮಲ್ ಮಾತನಾಡಿ, ಶಾಲಾ- ಕಾಲೇಜು, ಅಂಗನವಾಡಿಗಳು ಸೇರಿದಂತೆ ಎಲ್ಲಾ ಕಡೆಗಳಲ್ಲಿ ಸಸಿಗಳನ್ನು ನೆಡಲು ಮುಂದಾಗಬೇಕು. ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಹೆಚ್ಚಿನ ಆಸಕ್ತಿ ವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಗಿಡಗಳನ್ನು ನೆಡುವಂತಾಗಬೇಕು ಎಂದು ಹೇಳಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಎಡಕುಂಡಲು ಮಾತನಾಡಿ ಸಿಲ್ವರ್, ನಂದಿ, ಮಹಾಗನಿ, ಮಾವು, ಹಲಸು, ನೇರಳೆ, ಬಿದಿರು ಮತ್ತಿತರ ಗಿಡಗಳನ್ನು ಸಾಮಾಜಿಕ ಅರಣ್ಯ ಇಲಾಖಾ ವತಿಯಿಂದ ಒದಗಿಸಲಾಗುವುದು. ಮ್ಮ ತಮ್ಮ ವ್ಯಾಪ್ತಿಯಲ್ಲಿ ಗಿಡಗಳನ್ನು ನೆಡಲು ಕ್ರಮ ಕೈಗೊಳ್ಳಬೇಕೆಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಒ.ಆರ್.ಶ್ರೀರಂಗಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಮಪ್ಪ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಪದ್ಮಶೇಖರ ಪಾಂಡೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಟಿ.ಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಾಯಾದೇವಿ ಗಲಗಲಿ, ಬಿಸಿಎಂ ಇಲಾಖೆ ಅಧಿಕಾರಿ ಕೆ.ವಿ. ಸುರೇಶ್, ಐಟಿಡಿಪಿ ಇಲಾಖೆಯ ಕೆ.ಎಚ್. ಸತೀಶ್, ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇ ಶಕ ಕೆ.ಟಿ.ದರ್ಶನ್, ಜಿಪಂ ಇಂಜಿನಿಯರ್ ಶಶಿಧರ, ನಾಯ್ಕೋಡು, ತೋಟಗಾರಿಕಾ ಅಧಿಕಾರಿ ಮತ್ತಿತರರು ಉಪಸ್ಥಿತರಿದ್ದರು.