×
Ad

ಮುಂದಿನ ಮಾರ್ಚ್ ಅಂತ್ಯದೊಳಗೆ ಆರು ನೂತನ ಬಸ್ ಡಿಪೋಗಳ ಸ್ಥಾಪನೆ

Update: 2016-06-22 18:52 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ. 22: ಮುಂದಿನ ಮಾರ್ಚ್ ತಿಂಗಳ ಅಂತ್ಯದೊಳಗೆ ನಗರದ ಆರು ಭಾಗಗಳಲ್ಲಿ ಬಿಎಂಟಿಸಿಯ ನೂತನ ಬಸ್ ಡಿಪೋಗಳನ್ನು ಸ್ಥಾಪಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.

 ಬೆಂಗಳೂರು ಉತ್ತರ ತಾಲ್ಲೂಕಿನ ಸಾದೇನಹಳ್ಳಿಯಲ್ಲಿ 431 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಬಸ್ ಘಟಕ ಉದ್ಘಾಟಿಸಿ ಮಾತನಾಡಿದರು. ಈ ವರ್ಷದ ಬಜೆಟ್‌ನಲ್ಲಿ 120 ಕೋಟಿ ಹಣವನ್ನು ಬಿಎಂಟಿಸಿಗೆಂದು ಮೀಸಲಿಟ್ಟಿದ್ದು, ಮುಂದಿನ ದಿನಗಳಲ್ಲಿ ಸರಕಾರ ಒಂದು ಸಾವಿರ ಬಸ್‌ಗಳನ್ನು ಖರೀದಿಸಲು ಉದ್ದೇಶಿಸಿಲಾಗಿದೆ. ಶೀಘ್ರದಲ್ಲೇ 658 ಬಸ್‌ಗಳನ್ನು ಬಿಎಂಟಿಸಿಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು. ನಗರದಲ್ಲಿ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಪ್ರಯಾಣಿಕ ಅನುಗುಣವಾಗಿ ಬಸ್‌ಗಳ ಸಂಖ್ಯೆಯೂ ಹೆಚ್ಚಳವಾಗಿದೆ.ಆದರೆ ಹೆಚ್ಚುವರಿಯಾದ ಬಸ್‌ಗಳ ನಿರ್ವಹಣೆಗೆ ಬಸ್ ಡಿಪೋಗಳನ್ನು ಸ್ಥಾಪಿಸುವುದು ಅನಿವಾರ್ಯವಾಗಿದೆ ಎಂದು ಅವರು,6400 ಬಿಎಂಟಿಸಿ ನೌಕರರಿಗೆ ಗೃಹ ನಿರ್ಮಾಣ ಮಾಡಲು ಯೋಜನೆಯನ್ನು ರೂಪಿಸಲಾಗಿದ್ದು, ಗೃಹ ನಿರ್ಮಾಣಕ್ಕೆ ಜಾಗಗಳನ್ನು ನಿಯೋಜನೆ ಮಾಡಲು ಸಿದ್ಧತೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಾದೇನಹಳ್ಳಿ ಬಸ್ ಘಟಕದ ವಿಶಿಷ್ಟತೆಗಳು:  ಸಾದೇನಹಳ್ಳಿ ಬಸ್ ಘಟಕವನ್ನು ರೂ.4.31 ಕೋಟಿ ವೆಚ್ಚದಲ್ಲಿ 4 ಎಕರೆ ಭೂ ವಿಸ್ತೀರ್ಣದಲ್ಲಿ ನಿರ್ಮಿಣ ಗೊಂಡಿದೆ.ಎರಡು ಅಂತಸ್ತಿನ ಕಟ್ಟಡವು ಸುಸಜ್ಜಿತ ಮೂತಭೂತ ಸೌಲಭ್ಯಗಳನ್ನು ಒಳಗೊಂಡಿದೆ. 5ಅಂಕಣಗಳುಳ್ಳ ದುರಸ್ತಿ ಅಂಕಣ,ಎರಡು ಪರೀಕ್ಷಣಾ ಗುಂಡಿ, ಉಗ್ರಾಣ ಶಾಖೆ ಹಾಗೂ ತಾಂತ್ರಿಕ ಸಿಬ್ಬಂದಿ ಕೊಠಡಿಗಳು.ಜನರೇಟರ್ ಕೊಠಡಿ, ವಾಹನ ಸ್ವಚ್ಛತಾ ವೇದಿಕೆ,ಮಳೆ ನೀರು ಕೊಯ್ಲು ಹಾಗೂ ನೀರು ಮರು ಬಳಕೆಯ ವ್ಯವಸ್ಥೆ ಕಲ್ಪಿಸಲಾಗಿದೆ.

  ಈ ಘಟಕದಿಂದ 285ರ ಸಂಖ್ಯೆಯ ವಿವಿಧ ಮಾರ್ಗಗಳ 15 ಅನುಸೂಚಿಗಳನ್ನು ದೊಡ್ಡಬಳ್ಳಾಪುರ, ಕೆ.ಆರ್.ಮಾರುಕಟ್ಟೆ, ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಯಲಹಂಕ ನಿಲ್ದಾಣಗಳಿಂದ ಕನಸವಾಡಿ, ಜಿಂಕೆಬಚ್ಚಹಳ್ಳಿ, ಚಿಕ್ಕ ತುಮಕೂರು, ಸಾದೆನಹಳ್ಳಿ, ಬ್ಯಾತ, ಬೆಟ್ಟಹಳ್ಳಿ, ದೊಡ್ಡ ತುಮಕೂರು, ಲಿಂಗನಹಳ್ಳಿ, ಬೈರಾಪುರ, ಬುದುಮನಹಳ್ಳಿ, ಪಂಡಿತಪುರ, ಕೊಡಿಗೆಹಳ್ಳಿ, ಬಿನ್ನಮಂಗಲ, ದೊಡ್ಡಬಳ್ಳಾಪುರ ಮತ್ತು ಚೆಲ್ಲಹಳ್ಳಿ ಮಾರ್ಗಗಳಲ್ಲಿ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ.

ಕಾರ್ಯಕ್ರಮದಲ್ಲಿ ಸಂಸದ ವೀರಪ್ಪಮೊಯ್ಲಿ,ಶಾಸಕ ಎಸ್.ಆರ್. ವಿಶ್ವನಾಥ್, ಬಿಎಂಟಿಸಿ ಅಧ್ಯಕ್ಷ ನಾದಿರಾಜ ಜೈನ್, ಉಪಾಧ್ಯಕ್ಷ ವಿ.ಎಸ್. ಆರಾಧ್ಯ, ನಿರ್ದೇಶಕಿ ಏಕರೂಪ್‌ಕೌರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News