×
Ad

ಸ್ವಾಭಿಮಾನದಿಂದ ಬದುಕಲು ಉದ್ಯೋಗ ಕಂಡುಕೊಳ್ಳಿ: ಸಿಇಒ

Update: 2016-06-22 23:17 IST

ಕಾರವಾರ, ಜೂ.22: ಸ್ವಾಭಿಮಾನದಿಂದ ಬದುಕು ಸಾಗಿಸಲು ಪ್ರತಿಯೊಬ್ಬ ಯುವಕರು ಒಂದಲ್ಲ ಒಂದು ಉದ್ಯೋಗ ಕಂಡುಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಸಿಇಒ ರಾಮಪ್ರಸಾದ್ ಮನೋಹರ್ ಹೇಳಿದರು.

ಜಿಲ್ಲಾ ಪಂಚಾಯತ್‌ನ ಸೂರ್ಯ ಯೋಜನೆಯಡಿ ಆಯ್ಕೆಯಾದ ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಎಲ್ಲರೂ ತಮ್ಮ ಭವಿಷ್ಯಕ್ಕಾಗಿ ಉತ್ತಮ ಕೆಲಸಗಳನ್ನು ಕಂಡುಕೊಂಡು ಜವಾಬ್ದಾರಿಯಿಂದ ಬದುಕಬೇಕು. ದುಡಿಯುವ ಕೈಗಳಿಗೆ ಉದ್ಯೋಗ ಒದಗಿಸಲು ಈ ಯೋಜನೆ ಸಹಾಯಕಾರಿಯಾಗಲಿದೆ. ಸೂರ್ಯ ಯೋಜನೆಯ ಮೂಲಕ ಯೋಗ್ಯ ಅಭ್ಯರ್ಥಿಗಳಿಗೆ ವಿವಿಧ ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ ನೀಡಲಾಗುತ್ತಿದ್ದು, ಇದಕ್ಕಾಗಿ ಉಚಿತ ತರಬೇತಿಯನ್ನು ನೀಡಲಾಗಿದೆ. ಹಲವು ಅಭ್ಯರ್ಥಿಗಳು ಬೇರೆಯವರ ಮಾತಿಗೆ ಮರುಳಾಗಿ ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಾರೆ. ಎಲ್ಲರ ಮಾತನ್ನು ಆಲಿಸಿ, ಸ್ವಂತ ನಿರ್ಧಾರ ಕೈಗೊಳ್ಳುವ ಜಾಣ್ಮೆ ಅಭ್ಯರ್ಥಿಗಳಲ್ಲಿರಬೇಕು ಎಂದು ಕಿವಿಮಾತು ಹೇಳಿದರು. ಎಸ್‌ಪೈರ್ ಕಂಪೆನಿ ಮಾಲಕ ಹುಸೈನ್ ಮಾತನಾಡಿ, ವಿವಿಧ ಉದ್ಯೋಗವಕಾಶಗಳ ಬಗ್ಗೆ ವಿವರಿಸಿದರು. ಉತ್ತಮ ಸಂವಹನ ಇರುವವರೂ ಅಧಿಕ ಆದಾಯಗಳಿಸಬಹುದಾಗಿದೆ ಎಂದರು. ಐಟಿಸಿ ಕಂಪೆನಿಯ ಮುಖ್ಯಾಧಿಕಾರಿ ಎ. ಮಾಲಾಶ್ರಿ ಮಾತನಾಡಿ, ಇಂಗ್ಲಿಷ್ ಭಾಷೆಯೊಂದಿಗೆ ನೈಪುಣ್ಯತೆಯನ್ನು ಹೊಂದಿದಲ್ಲಿ ದೇಶದ ಯಾವ ಭಾಗದಲ್ಲಿ ಬೇಕಾದರೂ ಬದುಕಬಹುದು ಎಂದರು. ಜಿಪಂ ಅಧ್ಯಕ್ಷೆ ಜಯಶ್ರೀ ಮೋಗೇರ್ ಅಧ್ಯಕ್ಷತೆ ವಹಿಸಿದ್ದರು. ಈ ತರಬೇತಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ 72 ಅಭ್ಯರ್ಥಿಗಳು ಭಾಗವಹಿಸಿದ್ದು, ಪ್ರಥಮ ಹಂತದಲ್ಲಿ 10 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News